

ನವದೆಹಲಿ: ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯ್ದೆ(ಆರ್ ಟಿಐ) ತರಬಾರದು. ತಂದಿದ್ದೇ ಆದಲ್ಲಿ, ಅಧು ಪಕ್ಷಗಳ ಆಂತರಿಕ ಕಾರ್ಯನಿರ್ವಹಣೆ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಹೀಗೆಂದು ಸುಪ್ರೀಂ ಕೋರ್ಟ್‍ಗೆ ಕೇಂದ್ರ ಸರ್ಕಾರ ತಿಳಿಸಿದೆ.
ರಾಜಕೀಯ ಪಕ್ಷಗಳನ್ನೇಕೆ ಆರ್ ಟಿಐ ವ್ಯಾಪ್ತಿಗೆ ತರಬಾರದು ಎಂಬ ಸುಪ್ರೀಂ ಕೋರ್ಟ್ ಪ್ರಶ್ನೆಗೆ ಉತ್ತರವಾಗಿ ಕೇಂದ್ರ ಸರ್ಕಾರ ಈ ಪ್ರತಿಕ್ರಿಯೆ ನೀಡಿದೆ. ಅಸೋಸಿ ಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಎಂಬ ಎನ್‍ಜಿಒ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿ ಕೋರ್ಟ್ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿತ್ತು.
ಇದಕ್ಕೆ ಸೋಮವಾರ ಉತ್ತರಿಸಿದ ಸರ್ಕಾರ, ರಾಜಕೀಯ ಪಕ್ಷಗಳು ಸಂಸತ್ ಅಂಗೀಕರಿಸಿದ ಯಾವುದೇ ಕಾನೂನಿನ ಮೂಲಕವಾಗಲೀ ಅಥವಾ ಸಂವಿಧಾನದ ಮೂಲಕವಾಗಲೀ ರಚಿತವಾದದ್ದಲ್ಲ. ಹಾಗಾಗಿ ಅವುಗಳನ್ನು ಒಂದು ಸಂಸ್ಥೆಯೆಂದು ಪರಿಗಣಿಸುವಂತಿಲ್ಲ.
ಒಂದು ವೇಳೆ ಪಕ್ಷಗಳನ್ನು ಆರ್ ಟಿಐ ವ್ಯಾಪ್ತಿಗೆ ತಂದರೆ, ಪಕ್ಷಗಳ ಸುಲಲಿತ ಕಾರ್ಯ ನಿರ್ವಹಣೆಗೆ ಅಡ್ಡಿಯಾಗಲಿದೆ. ರಾಜಕೀಯ ಪ್ರತಿಸ್ಪರ್ಧಿಗಳು ದುರುದ್ದೇಶದಿಂದ ಅರ್ಜಿ ಸಲ್ಲಿಸುವ ಸಾಧ್ಯತೆಯಿರುತ್ತದೆ ಎಂದು ವಾದಿಸಿದೆ.