
ನವದೆಹಲಿ: ವಿಶ್ವದಾದ್ಯಂತ ತನ್ನ ಪೈಶಾಚಿಕ ಕೃತ್ಯವೆಸಗುತ್ತಿರುವ ಉಗ್ರರ ಸಂಘಟನೆಗಳು ಇದೀಗ ಭಾರತ ಮೇಲೂ ತನ್ನ ಕೆಂಗಣ್ಣನ್ನು ಬೀರಿದ್ದು, ರಾಜಧಾನಿ ದೆಹಲಿ ಮೇಲೆ ಆತ್ಮಾಹುತಿ ದಾಳಿ ಮಾಡಲು ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಉಗ್ರರು ಸಂಚು ರೂಪಿಸಿದ್ದಾರೆಂದು ಶನಿವಾರ ಮೂಲಗಳಿಂದ ತಿಳಿದುಬಂದಿದೆ.
ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯಲ್ಲಿ ಮಾಸ್ಟರ್ ಮೈಂಡ್ ಗಳೆಂದೇ ಕುಖ್ಯಾತಿಗಳಿಸಿರುವ ದುಜಾನಾ ಮತ್ತು ಉಕಾಶಾ ಇಬ್ಬರು ಉಗ್ರರು , ಈಗಾಗಲೇ ತಾಂತ್ರಿಕ ಹಾಗೂ ವ್ಯವಸ್ಥಾಪಕ ಸಹಾಯಗಳನ್ನು ಯೋಜಿಸುತ್ತಿದ್ದುತ ದೆಹಲಿ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದಾರೆಂದು ತಿಳಿದುಬಂದಿದೆ.
ದಾಳಿ ನಡೆಸಲು ಲಷ್ಕರ್-ಇ-ತೊಯ್ಬಾ ಸಂಘಟನೆ ಇದೀಗ ನುಮನ್, ಜೈದಿ ಮತ್ತು ಖುರ್ಷೀದ್ ಜೊತೆ ಮೈತ್ರಿಯಾಗಿದ್ದು, ದಾಳಿ ನಡೆಸಲು ಈಗಾಗಲೇ ದಾಳಿ ಬಗ್ಗೆ ಮಾಹಿತಿಗಳನ್ನು ಕಲೆಹಾಕಿದೆ ಎಂದು ಹೇಳಲಾಗುತ್ತಿದೆ.
ಕಳೆದ ಕೆಲವು ದಿನಗಳ ಹಿಂದಷ್ಟೇ ದೆಹಲಿ ಮೇಲೆ ಇಸಿಸ್ ಉಗ್ರರು ವೈಮಾನಿಕ ದಾಳಿ ನಡೆಸಲು ಸಂಚು ರೂಪಿಸಿದ್ದಾರೆಂಬ ಎಚ್ಚರಿಕೆಯ ಸಂದೇಶವನ್ನು ಗೃಹ ಇಲಾಖೆ ನೀಡಿತ್ತು. ದಾಳಿ ನಡೆಸುವ ಸಲುವಾಗಿ ಈಗಾಗಲೇ ಉಗ್ರರು ಯೋಜನೆ ರೂಪಿಸಿದ್ದು, ಭಾರತ ಪ್ರಮುಖ 15 ನಗರಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ. ಈ ಬಗ್ಗೆ ತೀವ್ರ ಕಟ್ಟೆಚ್ಚರ ವಹಿಸುವಂತೆ ಭದ್ರತಾಧಿಕಾರಿಗಳಿಗೆ ಇಲಾಖೆ ಎಚ್ಚರಿಕೆ ನೀಡಿತ್ತು. ಉಗ್ರರು ಪ್ರಧಾನಮಂತ್ರಿ ಗೃಹ, ಗೃಹ ಸಚಿವರು ಹಾಗೂ ಉಪ ರಾಷ್ಟ್ರಪತಿಯವರ ಮನೆ, ರಾಷ್ಟ್ರಪತಿ ಭವನ, ರಾಜಪಥ್, ಇಂಡಿಯಾ ಗೇಟ್ ಹಾಗೂ ಸಿಬಿಐ, ಸಿಐಎಸ್ಎಫ್, ಬಿಎಸ್ಎಫ್ ಪ್ರಧಾನ ಕಚೇರಿಗಳಿರುವ ಸಿಜಿಒ ಕಾಂಪ್ಲೆಕ್ಸ್ ಗಳನ್ನು ಗುರಿಯಾಗಿರಿಸಿಕೊಂಡಿರುವ ಉಗ್ರರು ಮಾನವರಹಿತ ವಾಯು ವ್ಯವಸ್ಥೆ, ಡ್ರೋಣ್, ಹಾಗೂ ಪ್ಯಾರಾಮೋಟಾರ್ಸ್ ಗಳ ಮುಖಾಂತರ ದಾಳಿ ನಡೆಸಲಿದ್ದಾರೆಂದು ಮಾಹಿತಿ ನೀಡಿತ್ತು.
ಉಗ್ರರ ದಾಳಿ ಕುರಿತಂತೆ ದೆಹಲಿ ಭಯೋತ್ಪಾದಕ ವಿರೋಧಿ ನಿಗ್ರಹ ದಳ ಡಿಸೆಂಬರ್ 1 ರಂದು ಎಫ್ಐಆರ್ ದಾಖಲಿಸಿಕೊಂಡಿತ್ತು. ಪೊಲೀಸರು ದಾಖಲಿಸಿಕೊಂಡಿರುವ ಎಫ್ಐಆರ್ ನ ಪ್ರಕಾರ ಉಗ್ರರು ಈಗಾಗಲೇ ದಾಳಿ ಕುರಿತಂತೆ ಸಂಚು ರೂಪಿಸಿದ್ದು, ಜನಪ್ರಿಯ ವ್ಯಕ್ತಿಗಳನ್ನು ಗುರಿಯಾಗಿರಿಸಿಕೊಂಡು ಜನನಿ ಬಿಡ ಪ್ರದೇಶಗಳಲ್ಲಿ ದಾಳಿ ನಡೆಸಲು ಸಂಚು ರೂಪಿಸಿದೆ ಎಂದು ಹೇಳಲಾಗುತ್ತಿತ್ತು. ಇದೀಗ ದಾಳಿ ಸಂಚು ಕುರಿತಂತೆ ತೀವ್ರ ಕಟ್ಟೆಚ್ಚರ ವಹಿಸಿರುವ ಅಧಿಕಾರಿಗಳು ಉಗ್ರರನ್ನು ಹಿಡಿಯಲು ಬಲೆ ಹಾಕಿದ್ದು, ಕಾರ್ಯಾಚರಣೆ ಆರಂಭಿಸಿದ್ದಾರೆಂದು ತಿಳಿದುಬಂದಿದೆ.
Advertisement