ಆಂಧ್ರ, ತೆಲಂಗಾಣಕ್ಕಷ್ಟೇ ಹಂಚಿಕೆ ಅನ್ವಯ, ರಾಜ್ಯಕ್ಕಿಲ್ಲ

ಕೃಷ್ಣಾ ನದಿ ನೀರನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವೆ ಹಂಚಿಕೆ ಮಾಡಬೇಕು, ಕರ್ನಾಟಕ ಮತ್ತು ಮಹಾರಾಷ್ಟ್ರ ಪಾಲಿನ ನೀರನ್ನು ಮುಟ್ಟುವಂತಿಲ್ಲ ಎಂದು ಕೇಂದ್ರ ಸುಪ್ರೀಂಗೆ ತಿಳಿಸಿದೆ...
ಕೃಷ್ಣಾ ನದಿ
ಕೃಷ್ಣಾ ನದಿ
ನವದೆಹಲಿ: ಕೃಷ್ಣಾ ನದಿ ನೀರನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವೆ ಹಂಚಿಕೆ ಮಾಡಬೇಕು, ಕರ್ನಾಟಕ ಮತ್ತು ಮಹಾರಾಷ್ಟ್ರ ಪಾಲಿನ ನೀರನ್ನು ಮುಟ್ಟುವಂತಿಲ್ಲ ಎಂದು ಕೇಂದ್ರ ಸುಪ್ರೀಂಗೆ ತಿಳಿಸಿದೆ. 
ನದಿ ನೀರನ್ನು 4 ರಾಜ್ಯಗಳ ನಡುವೆ ಮರು ಹಂಚಿಕೆ ಮಾಡಬೇಕು. ಅದಕ್ಕಾಗಿ ಹೊಸ ನ್ಯಾಯಾಧಿಕರಣ ರಚಿಸಬೇಕು ಎಂದು ಕೋರಿ ತೆಲಂಗಾಣ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೇಂದ್ರದ ನಿಲುವನ್ನು ಮಂಗಳವಾರ ಮೌಖಿಕವಾಗಿ ಸ್ಪಷ್ಟಪಡಿಸಿದರು. 
ನ್ಯಾ.ದೀಪಕ್ ಮಿಶ್ರಾ ಮತ್ತು ನ್ಯಾ.ಪಿ.ಸಿ.ಪಂತ್ ಅವರಿದ್ದ ನ್ಯಾಯ ಪೀಠವು ಈ ಬಗ್ಗೆ ಪ್ರಮಾಣ ಪತ್ರ ಸಲ್ಲಿಸುವಂತೆ ಕೇಂದ್ರಕ್ಕೆ ಸೂಚಿಸಿತು. ಇನ್ನೆರಡು ದಿನದಲ್ಲಿ ಸಲ್ಲಿಸುವುದಾಗಿ ಮೆಹ್ತಾ ನ್ಯಾಯಪೀಠಕ್ಕೆ ತಿಳಿಸಿದರು. ಕೇಂದ್ರ ಸರ್ಕಾರದ ಈ ನಿಲುವಿನಿಂದ ಕರ್ನಾಟಕ ಸಮಾಧಾನದ ನಿಟ್ಟುಸಿರು ಬಿಟ್ಟಿದೆ. ಒಂದು ವೇಳೆ ತೆಲಂಗಾಣದ ಕೋರಿಕೆಯಂತೆ ನಾಲ್ಕು ರಾಜ್ಯಗಳ ನಡುವೆ ನೀರು ಮರು ಹಂಚಿಕೆ ಆಗಬೇಕೆಂದು ತಿಳಿಸಿದ್ದರೆ ಐತೀರ್ಪಿನಲ್ಲಿ ದಕ್ಕಿರುವ ನೀರಿನ ಪ್ರಮಾಣ ಮರು ಹಂಚಿಕೆ ವೇಳೆ ಕಡಿಮೆ ಆಗುವ ಆತಂಕ ಇತ್ತು.
2010ರಲ್ಲಿ ಕೃಷ್ಣಾ ನ್ಯಾಯಾಧಿಕರಣ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ನಡುವೆ ನೀರು ಹಂಚಿಕೆ ಮಾಡಿದೆ. ಆಂಧ್ರಪ್ರದೇಶ ವಿಭಜನೆ ಆಗಿ ತೆಲಂಗಾಣ ರಾಜ್ಯ ಉದಯಿಸಿದ ನಂತರ ಹೊಸ ತಕರಾರು ಎದ್ದಿದೆ. ನಾಲ್ಕು ರಾಜ್ಯಗಳ ನಡುವೆ ಕೃಷ್ಣ ನದಿ ನೀರು ಮರುಹಂಚಿಕೆ ಮಾಡಬೇಕು ಎಂದು ತೆಲಂಗಾಣ ಅರ್ಜಿ ಸಲ್ಲಿಸಿದೆ. 
ಪ್ರಮಾಣ ಪತ್ರ: ಆಂಧ್ರಕ್ಕೆ ಹಂಚಿಕೆ ಮಾಡಿರುವ ನೀರನ್ನು ತೆಲಂಗಾಣಕ್ಕೆ ಹಂಚಿಕೆ ಮಾಡಬೇಕೆಂದು ಕರ್ನಾಟಕ, ಮಹಾರಾಷ್ಟ್ರ ಸರ್ಕಾರಗಳು ಪ್ರಮಾಣ ಪತ್ರ ಸಲ್ಲಿಸಿವೆ. ನ್ಯಾಯಾಧಿಕರಣದ 2ನೇ ಐತೀರ್ಪಿನಲ್ಲಿ ವಿಭಜನಾಪೂರ್ವ ಆಂಧ್ರಪ್ರದೇಶಕ್ಕೆ 1001 ಟಿಎಂಸಿ, ಕರ್ನಾಟಕಕ್ಕೆ 911 ಟಿಎಂಸಿ ಮತ್ತು ಮಹಾರಾಷ್ಟ್ರಕ್ಕೆ 666 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಆಂಧ್ರಪ್ರದೇಶದಿಂದ ವಿಭಜನೆಗೊಂಡ ತೆಲಂಗಾಣ ರಾಜ್ಯವು, ತನಗೆ ಹಿಂದಿನಿಂದಲೂ ಕಷ್ಣ ನದಿ ನೀರು ಹಂಚಿಕೆ ವಿಷಯದಲ್ಲಿ ಅನ್ಯಾಯವಾಗಿದೆ. ವಿಭಜನಾಪೂರ್ವದಲ್ಲಿ ಎಲ್ಲ ನೀರಾವರಿ ಯೋಜನೆಗಳು ಆಂಧ್ರ ಭಾಗದಲ್ಲೇ ಅನುಷ್ಠಾನಗೊಂಡಿದೆ. ನಮಗೆ ದಕ್ಕಬೇಕಾದ ಪಾಲು ದಕ್ಕಿಲ್ಲ. ಹೀಗಾಗಿ ನೀರಿನ ಮರು ಹಂಚಿಕೆ ನಾಲ್ಕು ರಾಜ್ಯಗಳ ನಡುವೆಯೇ ಆಗಬೇಕು ಎಂದು ಬೇಡಿಕೆ ಇಟ್ಟಿದೆ. ಆಂಧ್ರಕ್ಕೆ ನೀಡಿರುವ 1001 ಟಿಎಂಸಿ ನೀರನ್ನು ಆಂಧ್ರ-ತೆಲಂಗಾಣ ಹಂಚಿಕೊಳ್ಳಲಿ ಎಂಬುದು ಕರ್ನಾಟಕ- ಮಹಾರಾಷ್ಟ್ರದ ವಾದವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com