ಸಕ್ರಿಯ ನ್ಯಾಯಾಂಗ: ಸದನ ಸಮಿತಿ ಆಕ್ಷೇಪ

ಸಿಬಿಐ ತನಿಖೆಯ ಕಣ್ಗಾವಲು ಹಾಗೂ ತನಿಖೆಯ ಸ್ವರೂಪದ ಕುರಿತು ನಿರ್ದೇಶನ ನೀಡುವ ಮೂಲಕ ಸುಪ್ರೀಂಕೋರ್ಟ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಸಿಬಿಐ ತನಿಖೆಯ ಕಣ್ಗಾವಲು ಹಾಗೂ ತನಿಖೆಯ ಸ್ವರೂಪದ ಕುರಿತು ನಿರ್ದೇಶನ ನೀಡುವ ಮೂಲಕ ಸುಪ್ರೀಂಕೋರ್ಟ್ ಹಾಗೂ ಇತರ ಉಚ್ಚ ನ್ಯಾಯಾಲಯಗಳು ಇತ್ತೀಚಿನ ವರ್ಷಗಳಲ್ಲಿ ವಹಿಸಿರುವ ಪಾತ್ರ ಇದೀಗ ಸಂಸದೀಯ ಸಮಿತಿಯ ಕೆಂಗಣ್ಣಿಗೆ ಗುರಿಯಾಗಿದೆ. 
ಸಿಬಿಐನ ಪ್ರಮುಖ ಪ್ರಕರಣಗಳ ತನಿಖೆಗೆ ಸಂಬಂಧಪಟ್ಟಂತೆ ನ್ಯಾಯಾಲಯಗಳು ಪದೇ ಪದೆ ನಿರ್ದೇಶನ ನೀಡುವುದು, ತನಿಖೆಯಲ್ಲಿ ಮಧ್ಯಪ್ರವೇಶಿಸುತ್ತಿರುವುದು 1973ರ ಅಪರಾಧ ಸಂಹಿತೆಯ ಕಲಂ 172 ಮತ್ತು 173ರ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳ ತನಿಖೆ ವೇಳೆ ಉನ್ನತ ಕೋರ್ಟುಗಳು ತನಿಖೆಯ ದಿನದಿನದ ಪ್ರಗತಿ ವರದಿ ನೀಡುವಂತೆ ಕೇಳುತ್ತಿವೆ. 
ಇದು ಸಕ್ರಿಯ ನ್ಯಾಯಾಂಗದ ಅತಿ ಕ್ರಿಯಾಶೀಲತೆಯಾಗಿದ್ದು, ಅತಿಯಾದ ಅಧಿಕಾರ ಚಲಾವಣೆಯ ಯತ್ನ ಎಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಕಾನೂನು ಹಾಗೂನ್ಯಾಯ ವಿಷಯಗಳ ಮೇಲಿನ ಸಂಸದೀಯ ಸ್ಥಾಯಿ ಸಮಿತಿ ತನ್ನ ವರದಿಯಲ್ಲಿ ಹೇಳಿದೆ. 
ವಿಚಾರಣಾ ಪ್ರಕ್ರಿಯೆಗೆ ಅಡ್ಡಿ: ಸಿಬಿಐ ತನಿಖಾ ಪ್ರಕ್ರಿಯೆಯ ಮೇಲೆ ಕಣ್ಗಾವಲಿಡುವ ಹಾಗೂ ಮಧ್ಯಂತರ ಆದೇಶಗಳನ್ನು ನೀಡುವ ಮೂಲಕ ಉನ್ನತ ನ್ಯಾಯಾಲಯಗಳು, ಪ್ರಕರಣಗಳಿಂದ ಬಾಧಿತರಿಗೆ ಇರುವ ಪರಿಹಾರ ಮಾರ್ಗಗಳಿಗೆ ತಡೆಯೊಡ್ಡುತ್ತಿವೆ. 
ಅಲ್ಲದೆ, ತೀರಾ ಅವಸರದ ಮುಂಜಾಗ್ರತಾ ಕ್ರಮಗಳು ತನಿಖೆ ಮತ್ತು ನ್ಯಾಯಸಮ್ಮತ ವಿಚಾರಣಾ ಪ್ರಕ್ರಿಯೆಗೆ ಇದು ತೊಡಕುಂಟುಮಾಡುತ್ತಿದೆ ಎಂದು ಕಳೆದ ವಾರ ಸಂಸತ್‍ನ ಉಭಯ ಸದನಗಳಲ್ಲಿ ಮಂಡನೆಯಾದ ಲೋಕಪಾಲ್, ಲೋಕಾಯುಕ್ತ ಹಾಗೂ ಇತರ ಸಂಬಂಧಿತ ಕಾನೂನು(ತಿದ್ದುಪಡಿ) ಮಸೂದೆಯಲ್ಲಿ ಸಂಸದೀಯ ಸಮಿತಿ ಅಭಿಪ್ರಾಯಪಟ್ಟಿದೆ. 
2ಜಿ, ಕಲ್ಲಿದ್ದಲು ಹಗರಣ, ವ್ಯಾಪಂ ಸೇರಿದಂತೆ ಹಲವು ಬಹುಕೋಟಿ ಹಗರಣಗಳ ಕುರಿತ ಸಿಬಿಐ ತನಿಖೆಗಳು ಸುಪ್ರೀಂ ಕಣ್ಗಾವಲಿನಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಮಿತಿಯ ಈ ಆಕ್ಷೇಪ ಮಹತ್ವ ಪಡೆದುಕೊಂಡಿದೆ. ಇದೇ ವೇಳೆ, ದೇಶದ ಹಲವೆಡೆ ಸ್ಥಾಪಿಸಿರುವ ಸಿಬಿಐ ವಿಶೇಷ ನ್ಯಾಯಾಲಯಗಳ ಔಚಿತ್ಯವನ್ನೂ ಸಮಿತಿ ಪ್ರಶ್ನಿಸಿದ್ದು, ಈ ಬೆಳವಣಿಗೆ ರಾಜ್ಯ ಪೊಲೀಸರನ್ನು ಕೇವಲ ಹೋಂಗಾರ್ಡ್ ಮಟ್ಟಕ್ಕೆ ಸೀಮಿತಗೊಳಿಸಲಿದೆ. 
ಅಲ್ಲದೆ ಇದೇ ಸ್ಥಿತಿ ಮುಂದುವರಿದರೆ, ದೇಶದ ನ್ಯಾಯಾದಾನ ವ್ಯವಸ್ಥೆಗೆ ಅಪಾಯ ಎಂದು ಅಭಿಪ್ರಾಯಪಟ್ಟಿದೆ. ಲೋಕಪಾಲ್ ಜಾರಿಗೆ ಬಂದಲ್ಲಿ, ನ್ಯಾಯಾಲಯಗಳು ತನಿಖಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವುದು, ತನಿಖೆಯ ಮೇಲೆ ಕಣ್ಗಾವಲಿಡುವುದಕ್ಕೆ ಕಡಿವಾಣ ಬೀಳಲಿದೆ ಎಂದಿರುವ ಸಮಿತಿ, ಲೋಕಪಾಲ್ ನೇರವಾಗಿ ತನಿಖೆಯ ಉಸ್ತುವಾರಿ ವಹಿಸುವುದರಿಂದ ಈಗಿನ ನ್ಯಾಯ ವಿಚಾರಣಾ ವ್ಯವಸ್ಥೆ ಎದುರಿಸುತ್ತಿರುವ ಮುಜುಗರ ತಪ್ಪಲಿದೆ ಎಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com