ನಾನು ದೇವಾಲಯಕ್ಕೆ ಹೋಗದಂತೆ ಆರೆಸ್ಸೆಸ್ಸ್‌ನವರು ನನ್ನನ್ನು ತಡೆದರು: ರಾಹುಲ್ ಗಾಂಧಿ

ನಾನು ದೇವಾಲಯಕ್ಕೆ ಪ್ರವೇಶಿಸಬೇಕೆಂದು ಹೋದಾಗ ಅವರು ನನ್ನ ಮುಂದೆ ಮಹಿಳೆಯರನ್ನು ನಿಲ್ಲಿಸಿ ಬಿಟ್ಟರು. ಇದೆಲ್ಲಾ ಬಿಜೆಪಿಯ ಕೆಲಸ...
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ನವದೆಹಲಿ:  ನಾನು ಅಸ್ಸಾಂನ ಬರ್‌ಪೇಟಾ ಸತ್ರ ದೇಗುಲಕ್ಕೆ ಹೋಗಬೇಕಾದರೆ ಆರೆಸ್ಸೆಸ್ ನವರು ನನ್ನನ್ನು ತಡೆದರು. ನಾನು ದೇವಾಲಯಕ್ಕೆ ಹೋಗದಂತೆ ತಡೆಯಲು ಅವರ್ಯಾರು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ರಾಹುಲ್ ಬರ್‌ಪೇಟಾಗೆ ಆಗಮಿಸಿದ್ದರು.
ನಾನು ದೇವಾಲಯಕ್ಕೆ ಪ್ರವೇಶಿಸಬೇಕೆಂದು ಹೋದಾಗ ಅವರು ನನ್ನ ಮುಂದೆ ಮಹಿಳೆಯರನ್ನು ನಿಲ್ಲಿಸಿ ಬಿಟ್ಟರು. ಇದೆಲ್ಲಾ ಬಿಜೆಪಿಯ ಕೆಲಸ. ಈ ಘಟನೆಯಿಂದ ಪ್ರಧಾನಿ ಮೋದಿಯವರು ಯಾವ ಮನಸ್ಥಿತಿಯನ್ನು ಹೊಂದಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ರಾಹುಲ್ ದೂರಿದ್ದಾರೆ.
ಬರ್‌ಪೇಟಾ ಸತ್ರಕ್ಕೆ ರಾಹುಲ್ ಗಾಂಧಿಯನ್ನು ಪ್ರವೇಶಿಸಲು ಬಿಡಬಾರದು ಎಂದು ಬಿಜೆಪಿ ಮತ್ತು ಆರೆಸ್ಸೆಸ್ ಯೋಜನೆ ಹೂಡಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ತರುಣ್ ಗಗೋಯ್ ಭಾನುವಾರ ಹೇಳಿದ್ದರು. 
ಇದೀಗ ರಾಹುಲ್ ಗಾಂಧಿಗೆ ಸೋಮವಾರ ದೇವಾಲಯಕ್ಕೆ ಪ್ರವೇಶ ನಿಷೇಧಿಸಲಾಗಿದ್ದು, ಗಗೋಯ್ ಹೇಳಿಕೆ ನಿಜವಾಗಿದೆ.
ಅದಾಗ್ಯೂ, ಇದೆಲ್ಲದರ ಹಿಂದೆ ಬಿಜೆಪಿ ಆರೆಸ್ಸೆಸ್ ಕೈವಾಡವಿದ್ದು, ಮೋದಿಯವರೇ ಇದಕ್ಕೆ ಕಾರಣ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ರಾಹುಲ್ ಸುಳ್ಳು ಹೇಳುತ್ತಿದ್ದಾರೆ:
ರಾಹುಲ್  ಗೆ ದೇವಾಲಯ ಪ್ರವೇಶ ನಿಷೇಧ ಸುದ್ದಿಯಾಗುತ್ತಿದ್ದಂತೆ ರಾಹುಲ್ ಸುಳ್ಳು ಹೇಳುತ್ತಿದ್ದಾರೆ ಎಂದು ಟ್ವಿಟರ್ ಪ್ರತಿಕ್ರಿಯೆ ಗಳು ಬರತೊಡಗಿವೆ. ರಾಹುಲ್  ಅವರು ಬರ್ ಪೇಟಾ ಸತ್ರಕ್ಕೆ ಹೋಗಲೇ ಇಲ್ಲ. ಜನರು ಅಲ್ಲಿ ಕಾಯ್ತಾ ಇದ್ದಾರೆ. ಇನ್ನು ಅವರಿಗೆ ತಡೆಯೊಡ್ಡುವ ವಿಷಯ ಎಲ್ಲಿಂದ ಬಂತು? 
ಅಲ್ಲಿ ಆರೆಸ್ಸೆಸ್ಸ್ ನವರು ಇದ್ದಾರೆ ಆದ್ದರಿಂದ ಹೋಗದೇ ಇರುವುದು ಒಳಿತು ಎಂದು ಗಗೋಯ್ ಮಾಹಿತಿ ನೀಡಿದ್ದರು. ಆದರೆ ರಾಹುಲ್ ಅಲ್ಲಿಗೆ ಹೋಗಲೇ ಇಲ್ಲ  ಎಂಬ ಟ್ವೀಟ್ ಗಳು ಹರಿದಾಡುತ್ತಿವೆ.
ಏತನ್ಮಧ್ಯೆ, ಈ ಬಗ್ಗೆ ಬಿಜೆಪಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com