ನವದೆಹಲಿ: ಸಿಬಿಐ ಅಧಿಕಾರಿಗಳು ತಮ್ಮ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪದ ಬಳಕೆ ಮಾಡಿರುವುದು ಅಸಹ್ಯಕರ ಎಂದು ಬಿಜೆಪಿ ಮುಖಂಡ ವಿಜೇಂದರ್ ಗುಪ್ತಾ ಹೇಳಿದ್ದಾರೆ.
ದೆಹಲಿಯಲ್ಲಿ ಏನೇ ನಡೆದರೂ ಅದಕ್ಕೆ ಕೇಂದ್ರ ಸರ್ಕಾರವನ್ನು ದೂಷಿಸುವುದು ಕೇಜ್ರಿವಾಲ್ ಅವರಿಗೆ ಫ್ಯಾಷನ್ ಆಗಿಬಿಟ್ಟಿದೆ. ಸಿಬಿಐ ಪ್ರಧಾನಿ ಹಾಗೂ ಕೇಂದ್ರ ಸರ್ಕಾರ ಕೈಗೊಂಬೆಯಾಗಿಲ್ಲ. ಆಯಾ ಸಂಸ್ಥೆಗಳಿಗೆ ತಮ್ಮದೆ ಆದ ಅಧಿಕಾರವನ್ನು ನೀಡಿರುತ್ತೇವೆ. ಹೀಗಾಗಿ ಸಿಬಿಐ ಕಾರ್ಯಾಚರಣೆಯ ವಿವರಗಳನ್ನು ಕೇಂದ್ರ ಸರ್ಕಾರ ನೋಡಿಕೊಳ್ಳುವುದಿಲ್ಲ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಸಿಬಿಐ ದಾಳಿ ಕುರಿತಂತೆ ಕೇಜ್ರಿವಾಲ್, ರಾಜಕೀಯವಾಗಿ ನನ್ನನ್ನು ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಧ್ಯವಾಗಿಲ್ಲ. ಹೀಗಾಗಿ ಸಿಬಿಐ ದಾಳಿ ಮೂಲಕ ತಮ್ಮ ಹೇಡಿತನವನ್ನು ಪ್ರದರ್ಶಿಸಿದ್ದಾರೆ. ಮೋದಿ ಓರ್ವ ಸೈಕೋಪಾತ್ ಎಂದು ಟ್ವೀಟಿಸಿದ್ದರು.