ನವದೆಹಲಿ: ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಮಂಡಳಿಗಳಲ್ಲಿನ ಅವ್ಯವಸ್ಥೆ ಬಗ್ಗೆ ಮಾತನಾಡಿದ ಬಿಜೆಪಿ ಸಂಸದ ಕೀರ್ತಿ ಆಜಾದ್, ಡಿಡಿಸಿಎಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿದ್ದಾರೆ.
ಭಾನುವಾರ ಪತ್ರಿಕಾಗೋಷ್ಠಿ ಆರಂಭಿಸುವ ಮುನ್ನ ಮಾತನಾಡಿದ ಅವರು ನಾನು ಯಾವುದೇ ವ್ಯಕ್ತಿಯ ವಿರುದ್ಧ ಆರೋಪ ಮಾಡುತ್ತಿಲ್ಲ, ಬದಲಾಗಿ ಭ್ರಷ್ಟಾಚಾರವನ್ನು ಹೇಳುತ್ತಿದ್ದೇನೆ. ನಾನು ಪ್ರಧಾನಿ ನರೇಂದ್ರ ಮೋದಿ ಅವರ ದೊಡ್ಡ ಅಭಿಮಾನಿ. ಅವರು ಭ್ರಷ್ಟಾಚಾರದ ವಿರುದ್ಧ ನಡೆಸುತ್ತಿರುವ ಹೋರಾಟವನ್ನು ನಾನು ಬೆಂಬಲಿಸುತ್ತೇನೆ. ನಾನು ಇಲ್ಲಿ ಹೇಳುವುದನ್ನು ಯಾರೂ ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು ಎಂದಿದ್ದಾರೆ.
ಅನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆಜಾದ್, ಡಿಡಿಸಿಎ ಹಲವಾರು ನಕಲಿ ಕಂಪನಿಗಳಿಗೆ ಹಣ ನೀಡಿದೆ ಎಂದು ಆರೋಪಿಸಿದ್ದಾರೆ.
ಡಿಡಿಸಿಎ ತೋರಿಸುತ್ತಿರುವ ಬಿಲ್‌ಗಳಲ್ಲಿ ಹೆಚ್ಚಿನದ್ದು ತಪ್ಪು ಮಾಹಿತಿಯದ್ದು. ಕಂಪನಿಗಳೆಲ್ಲಾ ಚೆಕ್ ಬದಲು ನಗದು ರೀತಿಯಲ್ಲಿ ಹಣ ನೀಡಿದೆ. ದಿನವೊಂದಕ್ಕೆ ಲ್ಯಾಪ್‌ಟಾಪ್ ಬಾಡಿಗೆ ರು. 16,000 ಮತ್ತು ಪ್ರಿಂಟರ್ ಬಾಡಿಗೆ ರು. 3,000. ಇದನ್ನೆಲ್ಲಾ ಸರಿಯಾಗಿ ಪರಿಶೀಲಿಸದೆ ಬಿಸಿಸಿಐ ಹಣ ಪಾವತಿ ಮಾಡಿದೆ.
ಈ ಎಲ್ಲ ಆರೋಪಗಳಿಗೆ ಆಜಾದ್ ವೀಡಿಯೋ ಸಾಕ್ಷಿ ಒದಗಿಸಿದ್ದಾರೆ. ಈ ವೀಡಿಯೋದಲ್ಲಿ ವಿಕೆ ಅರ್ಗವಾಲ್ ಮತ್ತು ಕಂಪನಿ ಹಾಗೂ ಇಂಜಿನಿಯರ್ಸ್ ಪ್ರೈ. ಲಿಮಿಟೆಡ್‌ನ ಪಾತ್ರವನ್ನು ಉಲ್ಲೇಖಿಸಲಾಗಿದೆ.
ಕೆಲವು ನಕಲಿ ಕಂಪನಿಗಳಿಗೆ ಗುತ್ತಿಗೆ ನೀಡಿ ಯಾವುದೇ ರೀತಿಯ ತನಿಖೆ ನಡೆಸದೆ ಹಣ ಪಾವತಿಸಲಾಗಿದೆ. ಅಷ್ಟೇ ಅಲ್ಲ ಆ ಬಿಲ್‌ಗಳಲ್ಲಿ ನಕಲಿ ಮೊಬೈಲ್ ಸಂಖ್ಯೆಯನ್ನು ನಮೂದಿಸಲಾಗಿದೆ ಎಂದು ಆಜಾದ್ ಆರೋಪ ಮಾಡಿದ್ದಾರೆ.
13 ವರ್ಷಗಳ ಕಾಲ ಅರುಣ್ ಜೇಟ್ಲಿ ಅವರು ಡಿಡಿಸಿಎ ಮುಖ್ಯಸ್ಥರಾಗಿದ್ದಾಗ ಅಲ್ಲಿ ಭ್ರಷ್ಟಾಚಾರ ನಡೆದಿತ್ತು ಎಂದು ಆಮ್ ಆದ್ಮಿ ಈ ಹಿಂದೆಯೇ ಆರೋಪಿಸಿತ್ತು.