
ಲಖನೌ: ಅಯೋಧ್ಯೆ ಹಾಗೂ ಮಥುರಾದಲ್ಲಿರುವ ಮಸೀದಿಗಳ ಮೇಲಿನ ಹಕ್ಕನ್ನು ಬಿಟ್ಟುಕೊಟ್ಟು ಮುಸ್ಲಿಮರು ದೇವಾಲಯಗಳ ನಿರ್ಮಾಣಕ್ಕೆ ಸಹಕರಿಸಬೇಕು ಎಂದಿದ್ದ ಉತ್ತರ ಪ್ರದೇಶ ಸಚಿವ ಓಂ ಪ್ರಕಾಶ್ ನೆಹ್ರಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲಾಗಿದೆ.
ಮನರಂಜನಾ ತೆರಿಗೆ ಇಲಾಖೆಯ ಸಲಹೆಗಾರರೂ ಆಗಿರುವ ನೆಹ್ರಾ, ಮಂದಿರಗಳನ್ನು ನಿರ್ಮಿಸಲು ಮುಸ್ಲಿಮರು ಬೆಂಬಲಿಸಬೇಕು ಎಂದು ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸಂಪುಟದಿಂದ ವಜಾಗೊಳಿಸಿದ್ದಾರೆ. ರಾಮಮಂದಿರವನ್ನು ಅಯೋಧ್ಯೆಯಲ್ಲಿ ಅಲ್ಲದೇ ಮತ್ತೆಲ್ಲಿ ನಿರ್ಮಿಸಲು ಸಾಧ್ಯ ಎಂದಿದ್ದ ನೆಹ್ರಾ, ಮುಸ್ಲಿಮರು ಮಥುರಾ ಹಾಗೂ ಅಯೋಧ್ಯೆಯಲ್ಲಿರುವ ಮಸೀದಿಗಳ ಒಡೆತನವನ್ನು ಬಿಟ್ಟುಕೊಟ್ಟು, ಮಂದಿರಗಳ ನಿರ್ಮಾಣಕ್ಕೆ ಸಹಾಯ ಮಾಡಬೇಕು ಎಂದಿದ್ದರು.
ರಾಮಮಂದಿರ ನಿರ್ಮಾಣಕ್ಕಾಗಿ ವಿಶ್ವಹಿಂದು ಪರಿಷತ್ ಕಲ್ಲುಗಳನ್ನು ಸಂಗ್ರಹಿಸುತ್ತಿರುವ ಬಗ್ಗೆ ನೆಹ್ರಾ ಪ್ರತಿಕ್ರಿಯಿಸಿದ್ದರು. ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ನೆಹ್ರಾ, ಮಸೀದಿಗಳನ್ನು ನಿರ್ಮಿಸಲು ಹಿಂದುಗಳು ಸಹಾಯ ಮಾಡಬೇಕು, ಅಂತೆಯೇ ದೇವಾಲಯಗಳನ್ನು ನಿರ್ಮಿಸಲು ಮುಸ್ಲಿಂ ಬಾಂಧವರು ಸಹಾಯ ಮಾಡಬೇಕು ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.
Advertisement