ನವದೆಹಲಿ: ಡಿಡಿಸಿಎಂ ಹಗರಣದ ತನಿಖೆ ಸಂಬಂಧ ರಚನೆಯಾಗಿರುವ ತನಿಖಾ ಆಯೋಗದ ಬಗ್ಗೆ ಯಾವುದೇ ಸಮಸ್ಯೆ ಇದ್ದರೆ ಕೇಂದ್ರ ಸರ್ಕಾರ ಕೋರ್ಟ್ ಹೋಗಲಿ. ಆದರೆ ಎಎಪಿ ಸರ್ಕಾರ ಮಾತ್ರ ತನ್ನ ಕ್ರಮದಿಂದ ಹಿಂದೆ ಸರಿಯುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶನಿವಾರ ಹೇಳಿದ್ದಾರೆ.
'ನಾವು ನಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಡಿಡಿಸಿಎ ಹಗರಣ ಸಂಬಂಧ ದೆಹಲಿ ಸರ್ಕಾರ ರಚಿಸಿರುವ ತನಿಖಾ ಆಯೋಗದ ಬಗ್ಗೆ ಗೃಹ ಸಚಿವಾಲಯಕ್ಕೆ ಯಾವುದೇ ಸಮಸ್ಯೆಗಳಿದ್ದರೆ ಹೈಕೋರ್ಟ್‌ಗೆ ಹೋಗಲಿ' ಎಂದಿದ್ದಾರೆ.
ಜನರಿಂದ ಆಯ್ಕೆಯಾದ ದೆಹಲಿ ಸರ್ಕಾರಕ್ಕೆ ತನಿಖಾ ಆಯೋಗ ರಚಿಸುವ ಅಧಿಕಾರ ಇದೆ. ಹೀಗಾಗಿ ಕೇಂದ್ರ ಸರ್ಕಾರ ತನಿಖಾ ಆಯೋಗದ ಮಾನ್ಯತೆ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ತನಿಖಾ ಆಯೋಗದ ಕಾನೂನು ಮಾನ್ಯತೆ ಪ್ರಶ್ನಿಸಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು, ಈ ಸಂಬಂಧ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದರು.