
ನವದೆಹಲಿ: ಡಿಡಿಸಿಎ ಹಗರಣಗಳ ಬಗ್ಗೆ ತನಿಖೆ ನಡೆಸಲು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರಚಿಸಿರುವ ತನಿಖಾ ಆಯೋಗಕ್ಕೆ ಕಾನೂನಿನ ಮಾನ್ಯತೆ ಇಲ್ಲ. ಅದನ್ನು ರದ್ದು ಮಾಡುವಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.
ಇದರಿಂದಾಗಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.ಅಲ್ಲದೆ, ಕೇಜ್ರಿ ಜಂಗ್ ನಡುವೆ ಮತ್ತೊಂದು ಸುತ್ತಿನ ಜಟಾಪಟಿಗೆ ಕಾರಣವಾಗಲಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವ ಜಂಗ್, ತನಿಖಾ ಆಯೋಗ ಕಾಯ್ದೆ 1952ರಡಿಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ಮಾತ್ರ ತನಿಖಾ ಆಯೋಗ ರಚಿಸುವ ಅಧಿಕಾರ ಇದೆ.
ಕೇಂದ್ರಾಡಳಿತ ಪ್ರದೇಶವಾದ ದೆಹಲಿ ಸರ್ಕಾರಕ್ಕೆ ತನಿಖಾ ಆಯೋಗ ರಚಿಸುವ ಅಧಿಕಾರ ಇಲ್ಲ ಎಂದು ತಿಳಿಸಿದ್ದಾರೆ. ಸಿಎನ್‍ಜಿ ಫಿಟ್ ನೆಸ್ ಕಿಟ್‍ಗಳ ಹಗರಣ ಕುರಿತು ಕೇಜ್ರಿವಾಲ್ ಸರ್ಕಾರ ರಚಿಸಿದ್ದ ತನಿಖಾ ಆಯೋಗವನ್ನು ಕೇಂದ್ರ ಸರ್ಕಾರ ರದ್ದು ಮಾಡಿದ್ದನ್ನು ಉದಾಹರಿಸಿರುವ ನಜೀಬ್ ಜಂಗ್, ಆ ಪ್ರಕರಣದ ಆಧಾರದ ಮೇಲೆ ಡಿಡಿಸಿಎ ಹಗರಣದ ತನಿಖಾ ಆಯೋಗವನ್ನು ರದ್ದು ಮಾಡುವಂತೆ ಕೇಂದ್ರಕ್ಕೆ ಬರೆದಿರುವ ಪತ್ರದಲ್ಲಿ ಶಿಫಾರಸು ಮಾಡಿದ್ದಾರೆ.
ನಜೀಬ್ ಜಂಗ್ ಅವರ ಪತ್ರವನ್ನು ಕೇಂದ್ರ ಪರಿಶೀಲಿಸುತ್ತಿದೆ. ಶೀಘ್ರ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಕೇಜ್ರಿವಾಲ್ ಸರ್ಕಾರ ರಚಿಸಿರುವ ತನಿಖಾ ಆಯೋಗ ಅಸ್ಪಷ್ಟತೆಯಿಂದ ಕೂಡಿದೆ. ತನಿಖಾ ಆಯೋಗ ಕಾಯ್ದೆಯಂತೆ ಕನಿಷ್ಠ ಅಗತ್ಯಗಳನ್ನು ಪೂರೈಸಿಲ್ಲ ಎಂಬುದನ್ನು ಕೇಂದ್ರ ಮನಗಂಡಿದೆ. ಕಾಯ್ದೆಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿಯಡಿ ಸ್ಪಷ್ಟ ವಿಚಾರವಿದ್ದರೆ ಆಯೋಗ ರಚಿಸಬಹುದು ಎಂದು ಹೇಳಲಾಗಿದೆ. ಡಿಡಿಸಿಎ ಹಗರಣ ನಿಖರವಲ್ಲದ ಕಾರಣ ತನಿಖಾ ಆಯೋಗ ರಚಿಸಲಾಗದು ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ರಾಜಸ್ಥಾನದಲ್ಲಿ ಅಧಿಕಾರದ ಅವಧಿಯಲ್ಲಿ ನಡೆದ ಅವ್ಯವಹಾರ ಕುರಿತು ಹಿಂದಿನ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಸರ್ಕಾರ ರಚಿಸಿದ್ದ ಆಯೋಗವನ್ನು ತನಿಖಾ ಆಯೋಗ ಕಾಯ್ದೆಗೆ ಪೂರಕವಾಗಿ ರಚಿಸಿಲ್ಲ ಎಂಬ ಕಾರಣಕ್ಕೆ ಸುಪ್ರೀಂಕೋರ್ಟ್ ರದ್ದು ಮಾಡಿರುವ ಉದಾಹರಣೆಯೂ ಜಂಗ್ ವಾದಕ್ಕೆ ಪುರಾವೆಯಾಗಿದೆ.
ಕೇಂದ್ರದ ವಿರುದ್ಧ ಕೇಜ್ರಿ ಕಿಡಿ
``ಕೇಂದ್ರ ಸರ್ಕಾರ ದೆಹಲಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಜೇಟ್ಲಿ ವಿರುದ್ಧ ತನಿಖೆಗೆ ಆಯೋಗ ರಚಿಸಿದ ಕ್ರಮ ಕಾನೂನು ಬದ್ಧವಾಗಿದೆ. ಜೇಟ್ಲಿ ಅವರು ಲೆಫಿಟನೆಂಟ್ ಗವರ್ನರ್ ಕಚೇರಿಯನ್ನು ದುರುಪಯೋಗ ಮಾಡುವುದನ್ನು ಬಿಡಬೇಕು. ನಿಮ್ಮ ದಾಳಿಗೆ ನಾನು ಹೆದರಲಿಲ್ಲ. ತನಿಖಾ ಆಯೋಗಕ್ಕೆ ನೀವು ಯಾಕೆ ಹೆದರಿದ್ದೀರಿ? ಆಯೋಗ ನಿಯಮಬಾಹಿರ ಎಂದು ಮಾಧ್ಯಮಗಳು ಹೇಳುತ್ತಿವೆ. ಹಾಗಾದರೆ ಸಿಬಿಐ ನಡೆಸಿದ ದಾಳಿ ಸರಿಯೇ'' ಎಂದು ಕೇಜ್ರಿವಾಲ್ ಕೇಂದ್ರದ ವಿರುದ್ಧ ಗುಡುಗಿದರು.
Advertisement