
ನವದೆಹಲಿ: ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರದ ನಡುವೆ ತೀವ್ರ ತಿಕ್ಕಾಟಕ್ಕೆ ಕಾರಣವಾಗಿದ್ದ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ)ಯಲ್ಲಿನ ಭ್ರಷ್ಟಾಚಾರ ಹಗರಣದ ಕುರಿತಂತೆ ದೆಹಲಿ ಸರ್ಕಾರ ರಚಿಸಿದ್ದ ತ್ರಿಸದಸ್ಯ ಪೀಠದ ವರದಿ ಹೊರಬಿದ್ದಿದ್ದು, ವರದಿಯಲ್ಲಿ ಹಗರಣದ ಕೇಂದ್ರ ಬಿಂದು ಎಂದು ಆರೋಪಿಸಲಾಗಿದ್ದ ಅರುಣ್ ಜೇಟ್ಲಿ ಅವರ ಹೆಸರೇ ನಾಪತ್ತೆಯಾಗಿದೆ.
ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣದ ವಿಚಾರಣೆ ನಡೆಸಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ರಚಿಸಿದ್ದ ತ್ರಿಸದಸ್ಯ ತನಿಖಾ ವರದಿಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೆಸರೂ ಎಲ್ಲೂ ಪ್ರಸ್ತಾಪವಾಗಿಲ್ಲ. ಕೇಜ್ರಿವಾಲ್ ರಚಿಸಿದ್ದ ತ್ರಿಸದಸ್ಯ ತನಿಖಾ ಪೀಠ 247 ಪುಟಗಳ ತನ್ನ ವರದಿಯನ್ನು ಇಂದು ದೆಹಲಿ ಸರ್ಕಾರಕ್ಕೆ ಸಲ್ಲಿಸಿದ್ದು, ವರದಿಯಲ್ಲಿ ಡಿಡಿಸಿ ಅಧ್ಯಕ್ಷರಾಗಿದ್ದಾಗ ಜೇಟ್ಲಿ ಯಾವುದೇ ಅವ್ಯವಹಾರ ಅಥವಾ ಅಕ್ರಮ ಎಸಗಿದ್ದಾರೆಂಬ ಬಗ್ಗೆ ಯಾವುದೇ ಚಕಾರ ಎತ್ತಿಲ್ಲ.
ಆದರೆ ಫಿರೋಜ್ ಷಾ ಕೋಟ್ಲಾ ಕ್ರಿಕೆಟ್ ಸ್ಟೇಡಿಯಂ ಪುನರ್ ನಿರ್ಮಾಣಕ್ಕೆ ಸಂಬಂಧಪಟ್ಟ ವಿಷಯಗಳನ್ನಷ್ಟೇ ಪೀಠ ತನ್ನ ವರದಿಯಲ್ಲಿ ಪ್ರಸ್ತಾಪಿಸಿದೆ ಹೊರತು ಹಣಕಾಸು ಸಚಿವ ಅರುಣ್ ಜೇಟ್ಲಿ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅವ್ಯವಹಾರದ ಬಗ್ಗೆ ವರದಿಯಲ್ಲಿ ಯಾವುದೇ ಉಲ್ಲೇಖವೂ ಇಲ್ಲ ಎಂದು ಹೇಳಲಾಗುತ್ತಿದೆ.
ಆಪ್ ವಿರುದ್ಧ ಬಿಜೆಪಿ ಪ್ರತಿಭಟನೆ
ಅತ್ತ ತ್ರಿಸದಸ್ಯ ಪೀಠದ ತನಿಖಾ ವರದಿ ಹೊರಬೀಳುತ್ತಿದ್ದಂತೆಯೇ ಇತ್ತ ಬಿಜೆಪಿ ಕಾರ್ಯಕರ್ತರು ಆಮ್ ಆದ್ಮಿ ಪಕ್ಷದ ವಿರುದ್ಧ ತಿರುಗಿಬಿದ್ದಿದ್ದು, ಅರುಣ್ ಜೇಟ್ಲಿ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿದ ಅರವಿಂದ್ ಕೇಜ್ರಿವಾಲ್ ಅವರು ಈ ಕೂಡಲೇ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ. ಅಲ್ಲದೆ ಕೇಜ್ರಿವಾಲ್ ಕ್ಷಮೆ ಯಾಚಿಸದಿದ್ದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಬಿಜೆಪಿ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.
ಡಿಡಿಸಿಎನಲ್ಲಿ ನಡೆದಿದೆ ಎಂದು ಹೇಳಲಾಗುತ್ತಿರುವ ಭ್ರಷ್ಟಚಾರ ಪ್ರಕರಣದಲ್ಲಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರ ಪಾತ್ರವಿರುವ ಬಗ್ಗೆ ತನಿಖಾ ವರದಿಯಲ್ಲಿದ್ದು, ಆ ವರದಿಯನ್ನು ವಶಕ್ಕೆ ತೆಗೆದುಕೊಳ್ಳುವ ಹುನ್ನಾರದಿಂದಲೇ ಸಿಬಿಐ ದೆಹಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಹಾಗೂ ಸಿಎಂ ಕಚೇರಿ ಮೇಲೆ ದಾಳಿ ನಡೆಸಿತ್ತು ಎಂದು ಇತ್ತೀಚೆಗೆ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ ಮುಖಂಡರು ಆರೋಪಿಸಿದ್ದರು. ಈ ಪ್ರಕರಣ ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ತೀವ್ರ ತಿಕ್ಕಾಟಕ್ಕೆ ಕಾರಣವಾಗಿತ್ತು.
Advertisement