ಚಂಡೀಘಡದಲ್ಲಿ ಧರೆಗುರುಳಿದ ಕಟ್ಟಡ; 6 ಸಾವು, ಹಲವರ ನಾಪತ್ತೆ
ಚಂಡೀಘಡ: ನಿರ್ಮಾಣ ಹಂತದಲ್ಲಿದ್ದ 2 ಬೃಹತ್ ಕಟ್ಟಡಗಳು ಧರೆಗುರುಳಿದ ಪರಿಣಾಮ ಆರು ಮಂದಿ ಕಾರ್ಮಿಕರು ಸಾವನ್ನಪ್ಪಿದ ಧಾರುಣ ಘಟನೆ ಚಂಡೀಘಡದಲ್ಲಿ ಸೋಮವಾರ ನಡೆದಿದೆ.
ಚಂಡೀಘಡದ ಸೆಕ್ಟರ್ 26ನಲ್ಲಿ ಧಾನ್ಯ ಮಾರುಕಟ್ಟೆ ಸಮೀಪ ನಿರ್ಮಾಣ ಹಂತದಲ್ಲಿದ್ದ 2 ಬೃಹತ್ ಕಟ್ಟಡಗಳು ನೆಲಕ್ಕುರುಳಿದ್ದು, ಘಟನೆಯಲ್ಲಿ ಆರು ಮಂದಿ ಕಟ್ಟಡ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಕಟ್ಟಡದ ಅವಶೇಷಗಳ ನಡುವೆ ಹಲವು ಮಂದಿ ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸ್ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಪ್ರಸ್ತುತ 11 ಗಾಯಾಳುಗಳನ್ನು ಹೊರಗೆಳೆಯಲಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವಶೇಷಗಳಡಿಯಲ್ಲಿ ಇನ್ನೂ ಸುಮಾರು 12 ಮಂದಿ ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಕಟ್ಟಡದ ನೆಲಮಾಳಿಗೆಯಲ್ಲಿ ಕಾಮಗಾರಿ ನಡೆಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ. ಇನ್ನು ಕಟ್ಟಡದ ಅಡಿಪಾಯದ ಕಾಮಗಾರಿ ಕಳಪೆಯಾಗಿದ್ದು ಇದೇ ಕಾರಣಕ್ಕಾಗಿ ಕಟ್ಟಡ ಕುಸಿದಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿ ಕೊಂಡಿರುವ ಚಂಡೀಘಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ