
ನವದೆಹಲಿ: ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ (ಇಸಿಸ್) ಉಗ್ರ ಸಂಘಟನೆಯಿಂದ ಜೀವ ಬೆದರಿಕೆ ಕರೆ ಬಂದಿದೆ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರು ಮಂಗಳವಾರ ಹೇಳಿದ್ದಾರೆ.
ಇತ್ತೀಚೆಗಷ್ಟೇ ಶಾಸಕ ಸಂಗೀತ್ ಸೋಮ್ ಅವರು ಸಹ ಬೆದರಿಕೆ ಕರೆ ಬಂದಿರುವುದಾಗಿ ಹೇಳಿಕೊಂಡಿದ್ದರು. ಇಸಿಸ್ ಉಗ್ರ ಸಂಘಟನೆಯಿಂದ ಬೆದರಿಕೆ ಕರೆಯೊಂದು ಬಂದಿದ್ದು, ಅಂತರ್ಜಾಲದ ಮೂಲಕ ಬಂದಿರುವ ಕರೆಯಾಗಿದೆ ಎಂದು ಹೇಳಿದ್ದರು.
ಇದೀಗ ಸಾಕ್ಷಿ ಮಹಾರಾಜ್ ಅವರಿಗೂ ಇದೇ ರೀತಿಯಾಗಿ ಕರೆ ಬಂದಿರುವುದು ಹಲವು ಅನುಮಾನಗಳನ್ನುಂಟು ಮಾಡಿದೆ. ಸಾಕ್ಷಿ ಮಹಾರಾಜ್ ಹಾಗೂ ಸಂಗೀತ್ ಸೋಮ್ ಇಬ್ಬರಿಗೂ ಒಂದೇ ಸಂಖ್ಯೆಯಿಂದ ಕರೆಬಂದಿರುವುದು ಅನುಮಾನವನ್ನುಂಟು ಮಾಡಿದೆ. ಇಬ್ಬರಿಗೂ ಕರೆ ಬಂದಿರುವುದು ದಕ್ಷಿಣ ಅಮೆರಿಕಾದ ಚಿಲಿಯಿಂದ ಎಂದು ಹೇಳಲಾಗುತ್ತಿದೆ. ಕರೆ ಮಾಡಿದ ವ್ಯಕ್ತಿ ಹಿಂದಿ ಭಾಷೆಯಲ್ಲಿ ಮಾತನಾಡಿದ್ದು, ತಾನೊಬ್ಬ ಇಸಿಸ್ ಸಂಘಟನೆಯ ಸದಸ್ಯನಾಗಿದ್ದೇನೆಂದು ಹೇಳಿಕೊಂಡಿದ್ದಾನೆಂದು ತಿಳಿದುಬಂದಿದೆ.
ಬೆದರಿಕೆ ಕರೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಾಕ್ಷಿ ಮಹಾರಾಜ್ ಅವರು, ಕರೆ ಮಾಡಿದ ವ್ಯಕ್ತಿ ಇಸಿಸ್ ಸಂಘಟನೆ ಸದಸ್ಯನಾಗಿದ್ದೇನೆಂದು ಹೇಳಿದನು. ಅಲ್ಲದೆ, ಸಂಘಟನೆಯ ಹಿಟ್ ಲಿಸ್ಟ್ ನಲ್ಲಿ ತಾವೂ ಇದ್ದು, ಶೀಘ್ರದಲ್ಲೇ ಹತ್ಯೆ ಮಾಡಲಾಗುವುದು ಎಂದು ಹೇಳಿದನು. ಈ ಬೆದರಿಕೆ ಒಂದು ಬಾರಿಯಲ್ಲದೇ, ಐದಾರು ಬಾರಿ ಬಂದಿತ್ತು ಎಂದು ಹೇಳಿದ್ದಾರೆ.
ಬೆದರಿಕೆ ಕರೆ ಕುರಿತಂತೆ ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಬೆದರಿಕೆ ಕರೆ ಕುರಿತಂತೆ ಅಧಿಕಾರಿಗಳಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಈಗಾಗಲೇ ಈ ವಿಷಯ ರಾಜ್ಯಪಾಲ ರಾಮ್ ನಾಯ್ಕ್ ಅವರಿಗೂ ಮುಟ್ಟಿಸಲಾಗಿದೆ. ಭದ್ರತೆ ಹೆಚ್ಚಿಸುವಂತೆಯೂ ಮುಖ್ಯಮಂತ್ರಿ ಅಖಿಲೇಖ್ ಯಾದವ್ ಅವರಿಗೆ ಪತ್ರ ಬರೆಯಲಾಗಿದೆ. ಈ ವಿಷಯ ಸಂಬಂಧ ಗೃಹ ಸಚಿವ ರಾಜನಾಥ ಸಿಂಗ್ ಹಾಗೂ ಪಕ್ಷದ ಮುಖಂಡರನ್ನು ಶೀಘ್ರದಲ್ಲೇ ಭೇಟಿಯಾಗಲಿದ್ದೇನೆಂದು ಹೇಳಿಕೊಂಡಿದ್ದಾರೆ.
ಬೆದರಿಕೆ ಕರೆ ವಿಷಯಕ್ಕೆ ಸಂಬಂಧಿಸಿ ರಾಜ್ಯಪಾಲರು ಸಹ ಆಂತಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ಮಾತ್ರ ಸರಿಯಾದ ರಕ್ಷಣೆ ನೀಡುತ್ತಿಲ್ಲ ಎಂದು ಆರೋಪ ವ್ಯಕ್ತಪಡಿಸಿದ್ದಾರೆ.
Advertisement