
ನವದೆಹಲಿ: ದೆಹಲಿ ಕ್ಯಾಬಿನೆಟ್ ಟಿಪ್ಪಣಿಗೆ ಸಹಿಹಾಕಲು ನಿರಾಕರಿಸಿದ ಇಬ್ಬರು ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಿರುವ ದೆಹಲಿ ಸರ್ಕಾರದ ಕ್ರಮವನ್ನು ಖಂಡಿಸಿರುವ 200 ಕ್ಕೂ ಹೆಚ್ಚು ಅಧಿಕಾರಿಗಳು ಸಾಮೂಹಿಕ ರಜೆ ತೆಗೆದುಕೊಂಡು ಕೆಲಸಕ್ಕೆ ಗೈರು ಹಾಜರಾಗುವ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಪಬ್ಲಿಕ್ ಪ್ರಾಸಿಕ್ಯೂಟರ್ ಗಳ ವೇತನ ಹೆಚ್ಚಿಸುವುದಕ್ಕೆ ಸಂಬಂಧಿಸಿದಂತೆ ದೆಹಲಿ ಕ್ಯಾಬಿನೆಟ್ ಕಡತಕ್ಕೆ ಸಹಿ ಹಾಕಲು ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳಾದ ಸುಭಾಶ್ ಚಂದ್ರ, ಯಶ್ ಪಾಲ್ ಗರ್ಗ್ ಅವರನ್ನು ಅರವಿಂದ್ ಕೇಜ್ರಿವಾಲ್ ಸರ್ಕಾರ ಅಮಾನತುಗೊಳಿಸಿತ್ತು. ಡಿಎಎನ್ಐಸಿಎಸ್(ದೆಹಲಿ, ಅಂಡಮಾನ್ ಹಾಗೂ ನಿಕೋಬಾರ್ ದ್ವೀಪ ನಾಗರಿಕ ಸೇವೆ) ಯ 200 ಕ್ಕೂ ಅಧಿಕಾರಿಗಳು ದೆಹಲಿ ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದು ಕೆಲಸಕ್ಕೆ ಗೈರು ಹಾಜರಾಗುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ಅಧಿಕಾರಿಗಳ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ದೆಹಲಿ ಗೃಹ ಸಚಿವ ಸತ್ಯೇಂದ್ರ ಜೈನ್, ಪ್ರತಿಭಟನೆ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಅಧಿಕಾರಿಗಳನ್ನು ಅಮಾನತುಗೊಳಿಸುವುದು ಆಡಳಿತಾತ್ಮಕ ನಿರ್ಧಾರ ಎಂದು ತಿಳಿಸಿದ್ದಾರೆ. ಇತ್ತೀಚಿನ ವರದಿ ಪ್ರಕಾರ ದೆಹಲಿ ಸರ್ಕಾರ ಅಧಿಕಾರಿಗಳನ್ನು ಅಮಾನತುಗೊಳಿಸಿ ಹೊರಡಿಸಿದ್ದ ಆದೇಶವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ.
Advertisement