

ನವದೆಹಲಿ: ಫೆ . 14 ಅಂದ್ರೆ ಎಲ್ಲರಿಗೂ ನೆನಪಾಗೋದು ಪ್ರೇಮಿಗಳ ದಿನ ಎಂದು. ಆದರೆ, ಹಿಂದೂ ಮಹಾಸಭಾದವರು ಅಂದು `ಪ್ರೇಮ ವಿವಾಹ ದಿನ' ಎಂದು ಆಚರಿಸಲು ನಿರ್ಧರಿಸಿದ್ದಾರೆ. ಘರ್ ವಾಪಸಿಯ (ಮರು ಮತಾಂತರ) ಒಂದು ಭಾಗವಾಗಿ ಈ ಆಚರಣೆ ಮಾಡಲಾಗುತ್ತಿದೆ ಎಂದು ಸಂಘಟನೆ ಹೇಳಿಕೊಂಡಿದೆ. ಅಂದು ಅಂತರ್‍ಧರ್ಮೀಯ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಬೇರೆ ಧರ್ಮದ ಯುವತಿಯರನ್ನು ಪ್ರೀತಿಸಿದ ಹಿಂದೂ ಯುವಕರು ವಿವಾಹವಾಗಲು ಇಚ್ಛಿಸಿದರೆ ಅಂಥವರಿಗೆ ಕಂಕಣ ಭಾಗ್ಯ ದೊರಕಿಸುವುದಾಗಿ ಸಭಾ ಹೇಳಿಕೊಂಡಿದೆ. ಆದರೆ, ಇದಕ್ಕೊಂದು ಷರತ್ತು ಇಟ್ಟಿರುವ ಮಹಾಸಭಾ, ಬೇರೆ ಧರ್ಮದಯುವತಿಯರು ವಿವಾಹಕ್ಕೆ ಮುಂಚೆ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಬೇಕು. ಈ ಷರತ್ತಿಗೆ ಒಪ್ಪಿದರೆ ಅಂದು ಸಂಘಟನೆಯ ಕಚೇರಿಯಲ್ಲೇ ವಿವಾಹವನ್ನು ನೆರವೇರಿಸಲಾಗುತ್ತದೆ. ಒಂದು ದಿನ ಮುಂಚೆ ಸಂಘಟನೆಗೆ ತಿಳಿಸಿದರೆ, ವಿವಾಹ ಮಾಡುವ ಒಂದು ಗಂಟೆ ಮೊದಲು ಮತಾಂತರಗೊಳಿಸುವ ಪ್ರಕ್ರಿಯೆಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಚಂದ್ರ ಪ್ರಕಾಶ್ ಕೌಶಿಕ್ ಹೇಳಿದ್ದಾರೆ.