
ನವದೆಹಲಿ: ಬಹುಕೋಟಿ ಶಾರದಾ ಚಿಟ್‌ಫಂಡ್ ಹಗರಣಕ್ಕೆ ಸಂಬಂಧಿಸಿ ಮಾಜಿ ಸಚಿವರೊಬ್ಬರ ಬಂಧನವನ್ನು ಕೇಂದ್ರ ಗೃಹ ಕಾರ್ಯದರ್ಶಿ ಅನಿಲ್ ಗೋಸ್ವಾಮಿ ಅವರು ತಡೆಯಲೆತ್ನಿಸಿದರೆಂಬ ಆರೋಪದ ಹಿನ್ನೆಲೆಯಲ್ಲಿ ಅವರ ಹುದ್ದೆಗೆ ಕಂಟಕ ಎದುರಾಗಿದೆ.
ಕೇಂದ್ರ ಗೃಹ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ಸಿಬಿಐ ಅಧಿಕಾರಿಗಳಿಗೆ ಕರೆ ಮಾಡಿ ಸಚಿವರೊಬ್ಬರ ಬಂಧನವನ್ನು ತಡಯೆಲೆತ್ನಿಸಿದರೆಂಬ ಮಾಧ್ಯಮಗಳು ವರದಿ ಮಾಡಿದ್ದವು. ಈ ಸಂಬಂಧ ವಿವರಣೆ ನೀಡುವಂತೆ ಗೋಸ್ವಾಮಿ ಅವರನ್ನು ಗೃಹ ಸಚಿವ ರಾಜನಾಥ್ ಸಿಂಗ್ ಕೇಳಿದ್ದಾರೆ ಎನ್ನಲಾಗಿದೆ.
ಕಾರ್ಯದರ್ಶಿ ಹುದ್ದೆಯಿಂದ ಗೋಸ್ವಾಮಿ ಅವರನ್ನು ಬಹುತೇಕ ತೆಗೆದು ಹಾಕುವ ಸಾಧ್ಯತೆಗಳಿವೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಫೆಬ್ರವರಿ 7 ರಂದು ದೆಹಲಿ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದ್ದು, ಇದು ಮುಗಿಯುವವರೆಗೂ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿರುವ ಸಾಧ್ಯತೆಗಳು ಹೆಚ್ಚಿವೆ.
ಗೋಸ್ವಾಮಿ ಅವರು ಇದೇ ವರ್ಷ ಜುಲೈ ತಿಂಗಳಲ್ಲಿ ಎರಡು ವರ್ಷಗಳ ಅಧಿಕಾರಾವಧಿಯನ್ನು ಮುಗಿಸಿ ನಿವೃತ್ತರಾಗಲಿದ್ದಾರೆ.
ಕಳೆದ ವಾರ ಕೋಲ್ಕತಾದಲ್ಲಿ ಬಂಧಿಸಲ್ಪಟ್ಟ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಹಾಯಕ ಗೃಹ ಸಚಿವ ಮಾತಂಗ್ ಸಿಂಗ್ ಅವರ ಪರವಾಗಿ, ಸಿಬಿಐ ಅಧಿಕಾರಿಗಳನ್ನು ಗೃಹ ಖಾತೆಯ ಹಿರಿಯ ಅಧಿಕಾರಿಯೊಬ್ಬರು ಕರೆಸಿಕೊಂಡು ಚರ್ಚಿಸಿದ್ದರು ಎಂದು ಮಾಧ್ಯಮಗಳು ವರದಿ ಪ್ರಸಾರ ಮಾಡಿದ್ದವು.
ಶಾರದಾ ರಿಯಲ್ಟಿ ಕಂಪೆನಿಗೆ ಸಂಬಂಧಿಸಿದಂತೆ ಹಣ ದುರ್ಬಳಕೆ, ವಂಚನೆ ಹಾಗೂ ಕ್ರಿಮಿನಲ್ ಸಂಚಿನ ಆರೋಪದಲ್ಲಿ ಮಾತಂಗ್ ಸಿಂಗ್ ರನ್ನು ಬಂಧಿಸಲಾಗಿತ್ತು. ಬಂಗಾಲ ಮತ್ತು ಒಡಿಶಾದಲ್ಲಿನ ಸಾವಿರಾರು ಹೂಡಿಕೆದಾರರಿಗೆ ವಂಚಿಸಿದ ಆರೋಪದಲ್ಲಿ ಶಾರದಾ ರಿಯಲ್ಟಿ ಕಂಪೆನಿಯು ಸಿಬಿಐ ತನಿಖೆಗೆ ಗುರಿಯಾಗಿದೆ.
Advertisement