ಫೆ.20ಕ್ಕೆ ಶಾಸಕಾಂಗ ಸಭೆ ಕರೆದ ಬಿಹಾರ ಸಿಎಂ, ಮಾಂಝಿ ಪದಚ್ಯುತಿ ಸಾಧ್ಯತೆ

ಬಿಹಾರ ಮುಖ್ಯಮಂತ್ರಿ ಸ್ಥಾನದಿಂದ ವಾರಾಂತ್ಯದೊಳಗೆ ಕೆಳಗಿಳಿಯುವಂತೆ ಜಿತನ್ ರಾಮ್ ಮಾಂಝಿ ಅವರಿಗೆ ಜೆಡಿಯು ಸೂಚಿಸಿದೆ. ಆದರೆ...
ಜಿತನ್ ರಾಮ್ ಮಾಂಝಿ-ನಿತೀಶ್ ಕುಮಾರ್
ಜಿತನ್ ರಾಮ್ ಮಾಂಝಿ-ನಿತೀಶ್ ಕುಮಾರ್

ಪಾಟ್ನಾ: ಬಿಹಾರ ಮುಖ್ಯಮಂತ್ರಿ ಸ್ಥಾನದಿಂದ ವಾರಾಂತ್ಯದೊಳಗೆ ಕೆಳಗಿಳಿಯುವಂತೆ ಜಿತನ್ ರಾಮ್ ಮಾಂಝಿ ಅವರಿಗೆ ಜೆಡಿಯು ಸೂಚಿಸಿದೆ. ಆದರೆ ಹುದ್ದೆ ತ್ಯಜಿಸಲ್ಲ ಎನ್ನುತ್ತಿರುವ ಮಾಂಝಿ ಅವರನ್ನು ವಜಾಗೊಳಿಸುವ ಸಾಧ್ಯತೆ ಇದೆ.

ಸಿಎಂ ಹುದ್ದೆ ತ್ಯಜಿಸಲು ನಿರಾಕರಿಸಿರುವ ಮಾಂಝಿ ಅವರ ವಿರುದ್ಧ ಆಕ್ರೋಶಗೊಂಡಿರುವ ಜೆಡಿಯು, ಗೌರವಯುತವಾಗಿ ರಾಜಿನಾಮೆ ನೀಡಿ ಹೊರಬನ್ನಿ, ಇಲ್ಲ ಪದಚ್ಯುತಗೊಳ್ಳಲು ಸಿದ್ಧರಾಗಿ ಎಂದು ಎಚ್ಚರಿಸಿದೆ.

ಈ ಮಧ್ಯೆ ಜೆಡಿಯು ಅಧ್ಯಕ್ಷ ಶರದ್ ಯಾದವ್ ಅವರು ಫೆ.7ರಂದು ಕರೆದಿದ್ದ ಜೆಡಿಯು ಶಾಸಕಾಂಗ ಪಕ್ಷ ಸಭೆ ಅನಧಿಕೃತ ಎಂದಿರುವ ಮಾಂಝಿ, ಫೆಬ್ರವರಿ 20ರಂದು ಸಂಜೆ 7ಕ್ಕೆ ತಮ್ಮ ನಿವಾಸದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ ನೀಡಿದೆ.

ಶಾಸಕಾಂಗ ಪಕ್ಷದ ನಾಯಕ(ಮುಖ್ಯಮಂತ್ರಿಗಳು)ರೇ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು. ಹೀಗಾಗಿ ಶರದ್ ಯಾದವ್ ಅವರು ಕರೆದಿರುವ ಸಭೆ ಅಧಿಕೃತ ಅಲ್ಲ ಎಂದು ಮಾಂಝಿ ಹೇಳಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಯು ಪ್ರಧಾನ ಕಾರ್ಯದರ್ಶಿ, ಕೆ.ಸಿ.ತ್ಯಾಗಿ ಅವರು, ಪಕ್ಷದ ಅಧ್ಯಕ್ಷರು ಕರೆಯುವ ಶಾಸಕಾಂಗ ಪಕ್ಷದ ಸಭೆ ಅಧಿಕೃತ. ಜೆಡಿಯು ಸಂವಿಧಾನದ ಪ್ರಕಾರ, ಪಕ್ಷದ ಅಧ್ಯಕ್ಷರಿಗೆ ಶಾಸಕಾಂಗ ಪಕ್ಷದ ಸಭೆ ಕರೆಯುವ ಅಧಿಕಾರ ಇದೆ ಎಂದು ಹೇಳಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಅನುಭವಿಸಿದ ಹೀನಾಯ ಸೋಲಿನ ನೈತಿಕ ಹೊಣೆ ಹೊತ್ತು ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ, ಆ ಸ್ಥಾನವನ್ನು ಮಾಂಝಿಗೆ ಬಿಟ್ಟುಕೊಟ್ಟಿದ್ದರು. ಆದರೆ, ಭ್ರಷ್ಟಾಚಾರ ಆರೋಪ, ಸಡಿಲ ನಾಲಗೆಯಿಂದಾಗಿ ಮಾಂಝಿ ಅನೇಕ ಬಾರಿ ಪಕ್ಷವನ್ನು ಮುಜುಗರಕ್ಕೆ ಈಡು ಮಾಡಿದ್ದಾರೆ. ಸದ್ಯದಲ್ಲೇ ಬಿಹಾರದಲ್ಲಿ ವಿಧಾನಸಭೆ ಚುನಾವಣೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ, ಇದರಿಂದ ಪಕ್ಷಕ್ಕೆ ತೀವ್ರ ಹಿನ್ನಡೆ ಆಗುವ ಸಾಧ್ಯತೆ ಇದೆ. ಹೀಗಾಗಿ ಮಾಂಝಿ ಅವರನ್ನು ಕೆಳಗಿಳಿಸಿ ಮತ್ತೆ ನಿತೀಶ್ ಅವರನ್ನು ಮುಖ್ಯಮಂತ್ರಿ ಗದ್ದುಗೆಯಲ್ಲಿ ಕೂರಿಸುವುದು ಪಕ್ಷದ ಉದ್ದೇಶ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com