
ಜೈಪುರ: 20 ವರ್ಷ ಪ್ರಾಯದ ಜಪಾನಿನ ಪ್ರವಾಸಿ ಮಹಿಳೆಯ ಮೇಲೆ ಗೈಡ್ ಓರ್ವ ಜೈಪುರದ ಹೊರವಲಯದಲ್ಲಿ ಅತ್ಯಾಚಾರವೆಸಗಿರುವ ಘಟನೆ ಬೆಳಕಿಗೆ ಬಂದಿದೆ.
ಭಾನುವಾರ ಬೆಳಗ್ಗೆ ರಾಜಸ್ಥಾನದ ಜೈಪುರಕ್ಕೆ ಆಗಮಿಸಿದ್ದ ಜಪಾನೀ ಮಹಿಳೆಗೆ ಇಂಗ್ಲಿಷ್ ಮಾತನಾಡಬಲ್ಲ ಯುವಕನ ಪರಿಚಯವಾಗಿದ್ದು, ಆತ ತಾನು ಆಕೆಗೆ ಗೈಡ್ ಎಂದು ಹೇಳಿಕೊಂಡಿದ್ದಾನೆ. ಯುವತಿಯೊಂದಿಗೆ ಪರಿಚಯ ಬೆಳೆಸಿಕೊಂಡು ಆತ ತನ್ನ ಮೋಟಾರ್ ಸೈಕಲ್‌ನಲ್ಲಿ ನಗರ ಸುತ್ತಿದ್ದು, ಸಂಜೆಯ ವೇಳೆಗೆ ಆತ ಆಕೆಯನ್ನು ಜೈಪುರ ಹೊರವಲಯದಲ್ಲಿನ ದುದು-ಫಾಗಿ ರಸ್ತೆಯೆಡೆಗೆ ಕರೆದೊಯ್ದು ಅಲ್ಲಿನ ನಿರ್ಜನ ಪ್ರದೇಶದಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.
ಭಾನುವಾರ ಮಧ್ಯರಾತ್ರಿ 2 ಗಂಟೆಯ ಸುಮಾರಿನಲ್ಲಿ ಜಪಾನ್ ಮಹಿಳೆ ದುದು ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ದೂರು ದಾಖಲಿಸಿದ್ದಾಳೆ. ಜೈಪುರ ವಲಯದ ಐಜಿಪಿ ಡಿ. ಸಿ. ಜೈನ್ ತಿಳಿಸಿದ್ದಾರೆ. ಪ್ರಸ್ತುತ ಗೈಡ್ ಎಂದು ಹೇಳಿಕೊಂಡ ಯುವಕ ನಾಪತ್ತೆಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಅತ್ಯಾಚಾರಿ ಯುವಕನ ವಿರುದ್ಧ ಪೊಲೀಸರು ಐಪಿಸಿ 376ನೇ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
Advertisement