ಹೆಸರು ಬಹಿರಂಗದಿಂದ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ: ಅರುಣ್ ಜೇಟ್ಲಿ

ವಿದೇಶಿ ಬ್ಯಾಂಕುಗಳಲ್ಲಿ ಕಪ್ಪು ಹಣ ಹೊಂದಿರುವವರ ಪಟ್ಟಿಯೊಂದರಿಂದಲೇ ಸೂಕ್ತ ಕ್ರಮ ತೆಗೆದುಕೊಳ್ಳಲು...
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ

ನವದೆಹಲಿ: ವಿದೇಶಿ ಬ್ಯಾಂಕುಗಳಲ್ಲಿ ಕಪ್ಪು ಹಣ ಹೊಂದಿರುವವರ ಪಟ್ಟಿಯೊಂದರಿಂದಲೇ ಸೂಕ್ತ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಪ್ರಮುಖ ದಾಖಲೆಗಳ ಅಗತ್ಯವಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಸೋಮವಾರ ಹೇಳಿದ್ದಾರೆ.

ದಿ ಇಂಡಿಯನ್ ಎಕ್ಲ್‌ಪ್ರೆಸ್ ಹಾಗೂ ಇತರ ಪತ್ರಿಕಾ ತನಿಖಾ ಸಂಸ್ಥೆಗಳು ಮೂರು ತಿಂಗಳ ಕಾಲ ತನಿಖೆ ನಡೆಸಿ ವಿದೇಶದಲ್ಲಿ ಖಾತೆ ಹೊಂದಿರುವ  1, 195 ಭಾರತೀಯರ ಹೆಸರು ಬಹಿರಂಗಗೊಳಿಸಿದ್ದವು. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಅರುಣ್ ಜೇಟ್ಲಿ, ಬಹಿರಂಗಗೊಂಡಿರುವ ವಿದೇಶಿ ಖಾತೆದಾರರ ನಾಮ ಪಟ್ಟಿ ಮೊದಲೇ ನಮ್ಮ ಬಳಿ ಇತ್ತು. ಆದರೆ ಕೆಲವರ ಹೆಸರು ಮಾತ್ರ ಪಟ್ಟಿಯಲ್ಲಿ ಇರಲಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತದೆ. ಕೇವಲ ನಾಮ ಪಟ್ಟಿಯಿಂದ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ಪ್ರಮುಖ ದಾಖಲೆಗಳು ಕ್ರೋಢಿಕರಿಸಬೇಕಿದೆ ಎಂದು ಹೇಳಿದ್ದಾರೆ.

ಜಿನಿವಾದ ಹೆಚ್‌ಎಸ್‌ಬಿಸಿ ಬ್ಯಾಂಕ್‌ನಲ್ಲಿ ಒಟ್ಟು 1,995 ಮಂದಿ ಭಾರತೀಯರು ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದ್ದಾರೆ. ಇವರಲ್ಲಿ 60 ಮಂದಿ ಖಾತೆದಾರರ ಹೆಸರು ಮತ್ತು ವಿಳಾಸ ಖಚಿತವಾಗಿದ್ದು, ಶೀಘ್ರದಲ್ಲಿಯೇ 350 ಮಂದಿಯನ್ನು ತನಿಖೆಗೊಳಪಡಿಸಲಾಗುತ್ತದೆ. ಬಳಿಕ ತನಿಖೆಯ ಮೂಲಕ ಕಪ್ಪು ಹಣವನ್ನು ಭಾರತಕ್ಕೆ ಮರಳಿ ತರಲು ಪ್ರಯತ್ನ ನಡೆಸುತ್ತೇವೆ ಎಂದರು.

ದಿ ಇಂಡಿಯನ್ ಎಕ್ಲ್‌ಪ್ರೆಸ್, ವಾಷಿಂಗ್ಟನ್ ಮೂಲದ ತನಿಖಾ ಪತ್ರಿಕೋದ್ಯಮಿಗಳ ಸಂಸ್ಥೆ(ಐಸಿಐ) ಹಾಗೂ ಪ್ಯಾರಿಸ್ ಮೂಲಕ ಲೆ ಮಾಂಡೆ ದಿನಪತ್ರಿಕೆ ಜಂಟಿಯಾಗಿ ನಡೆಸಿದ ತನಿಖೆಯಲ್ಲಿ ವಿದೇಶದಲ್ಲಿ ಕಪ್ಪು ಹಣ ಹೊಂದಿರುವ ಭಾರತೀಯರ ಹೆಸರನ್ನು ಬಹಿರಂಗ ಪಡಿಸಿತ್ತು. ಈ ಪಟ್ಟಿಯಲ್ಲಿ ಅನಿಲ್ ಅಂಬಾನಿ, ಮುಕೇಶ್ ಅಂಬಾನಿ, ಆನಂದ್ ಚಂದ್ ಬುರ್ಮಾನ್, ರಾಜನ್ ನಂದ, ಯಶೋವರ್ಧನ್ ಬಿರ್ಲಾ ಸೇರಿದಂತೆ ಪ್ರಮುಖ ಉದ್ಯಮಿಗಳು ಎಚ್‌ಎಸ್‌ಬಿಸಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದು ಒಟ್ಟು 1,195 ಮಂದಿಯ ಖಾತೆಯ ವಿವರ ಲಭ್ಯವಾಗಿತ್ತು.

2013ರ ನವೆಂಬರ್‌ನಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ವಿದೇಶದಲ್ಲಿ ರಾಶಿ ಹಾಕಲಾಗಿರುವ ಕಪ್ಪು ಹಣವನ್ನು ಭಾರತಕ್ಕೆ ವಾಪಸ್ ತರಿಸುವುದಾಗಿ ಭರವಸೆ ನೀಡಿದರಲ್ಲದೆ, ಈ ವಿಷಯದಲ್ಲಿ ಸೂಕ್ತ ಕಾನೂನು ಜಾರಿಗೆ ತರಬೇಕು ಎಂದು ಹೇಳಿದ್ದರು. 2014ರ ಮೇ ತಿಂಗಳಿನಲ್ಲಿ ಮಹಾ ಚುನಾವಣೆಯಲ್ಲಿ ಕಪ್ಪು ಹಣವನ್ನು ವಾಪಸ್ ತರುತ್ತೇವೆ ಎಂದು ಬಿಜೆಪಿ ಘೋಷಿಸಿತ್ತು. 2014 ಅಕ್ಟೋಬರ್‌ನಲ್ಲಿ ವಿದೇಶದಲ್ಲಿ ಖಾತೆ ಹೊಂದಿರುವವರ ಪಟ್ಟಿ ನೀಡಿ, ನೀವೇನೂ ಮಾಡಬೇಕಿಲ್ಲ ನಾವೇ ತನಿಖೆ ನಡೆಸುತ್ತೇವೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ವಿದೇಶದಲ್ಲಿ ಖಾತೆ ಹೊಂದಿರುವವರ ಪಟ್ಟಿಯನ್ನು ಸುಪ್ರೀಂ ಕೋರ್ಟ್‌ಗೆ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com