ಯೋಜನೆಗಳಿಗೆ ನೀತಿ ಪ್ರಸ್ತಾಪ

ಕೇಂದ್ರದ 66 ಯೋಜನೆಗಳ ಸಮರ್ಪಕ ಅನುಷ್ಠಾನ, ಯೋಜನೆಗಳ ಅಧ್ಯಯನಕ್ಕಾಗಿ ಉಪ-ವಿಭಾಗಗಳ...
ಯೋಜನೆಗಳಿಗೆ ನೀತಿ ಪ್ರಸ್ತಾಪ
Updated on

ನವದೆಹಲಿ: ಕೇಂದ್ರದ 66 ಯೋಜನೆಗಳ ಸಮರ್ಪಕ ಅನುಷ್ಠಾನ, ಯೋಜನೆಗಳ ಅಧ್ಯಯನಕ್ಕಾಗಿ ಉಪ-ವಿಭಾಗಗಳ ರಚನೆ, ರಾಜ್ಯಗಳಿಗೆ ಹಣಕಾಸು ನೆರವು ವೇಳೆ `ಎಲ್ಲರಿಗೂ ಒಂದೇ ವ್ಯವಸ್ಥೆ ಅನ್ವಯ' ನೀತಿಗೆ ಕೊಕ್...

ಹೊಸದಾಗಿ ರಚನೆಯಾಗಿರುವ ನೀತಿ ಆಯೋಗದ ಆಡಳಿತ ಮಂಡಳಿಯ ಮೊದಲ ಸಭೆಯಲ್ಲಿ ನಿರ್ಧಾರವಾದ ಅಂಶಗಳಿವು. ಭಾನುವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಂಡಳಿಯ ಮೊದಲ ಸಭೆ ನಡೆದಿದೆ.

ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, `ಎಲ್ಲರಿಗೂ ಒಂದೇ ವ್ಯವಸ್ಥೆ ಅನ್ವಯ' ನೀತಿಯಿಂದ ಹೊರಬಂದು, ರಾಜ್ಯಗಳ ಅಗತ್ಯತೆಗೆ ಅನುಗುಣವಾಗಿ ಯೋಜನೆಗಳನ್ನು ಅನುಷ್ಠಾನ ಮಾಡುವ ಕೆಲಸ ನಡೆಯಬೇಕಿದೆ ಎಂದಿದ್ದಾರೆ. ಜತೆಗೆ, ಕೇಂದ್ರ ಪ್ರಾಯೋಜಿತ 66 ಯೋಜನೆಗಳ ಅಧ್ಯಯನ ನಡೆಸಲು ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಳಗೊಂಡ ಉಪ-ವಿಭಾಗಗಳನ್ನು ರಚಿಸುವ ಘೋಷಣೆಯನ್ನೂ ಮಾಡಿದ್ದಾರೆ. ಇದೇ ವೇಳೆ, ನೀತಿ ಆಯೋಗದ ಅಡಿಯಲ್ಲಿ ಎರಡು ಕ್ರಿಯಾಪಡೆಗಳನ್ನು ರಚಿಸುವಂತೆಯೂ ರಾಜ್ಯಗಳಿಗೆ ಪ್ರಧಾನಿ ಸೂಚಿಸಿದ್ದಾರೆ.

ಒಂದು ಪಡೆಯು ಬಡತನ ನಿರ್ಮೂಲನೆಗೆ ಪ್ರತಿ ರಾಜ್ಯದಲ್ಲಿ ಯಾವ ರೀತಿಯ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕೆಂದು ನಿರ್ಧರಿಸಿದರೆ, ಮತ್ತೊಂದು ಪಡೆಯು ಕೃಷಿ ಕ್ಷೇತ್ರ ಪ್ರಗತಿಗಾಗಿ ಕಾರ್ಯನಿರ್ವಹಿಸಲಿದೆ ಎಂದಿದ್ದಾರೆ ಮೋದಿ. ಮೂರು ಉಪ-ವಿಭಾಗಗಳು: ನೀತಿ ಆಯೋಗದ ಸಭೆಯಲ್ಲಿ ರಾಜ್ಯಗಳ ಸಬಲೀಕರಣ ಪ್ರಸ್ತಾಪಕ್ಕೆ ಸಂಬಂಧಿಸಿ ಒಮ್ಮತ ಮೂಡಿಬಂದಿದ್ದು ವಿಶೇಷವಾಗಿತ್ತು. ಮುಂದಿನ ಒಂದು ಅಥವಾ ಒಂದೂವರೆ ತಿಂಗಳೊಳಗೆ 3 ಉಪ-ವಿಭಾಗಗಳನ್ನು ರಚಿಸುವಂತೆ ಪ್ರಧಾನಿ ಮೋದಿ ರಾಜ್ಯಗಳಿಗೆ ಸೂಚಿಸಿದ್ದಾರೆ.

ಈ ವಿಭಾಗಗಳು ಕೇಂದ್ರ ಪ್ರಾಯೋಜಿತ 66 ಯೋಜನೆಗಳ ಬಗ್ಗೆ ಅಧ್ಯಯನ ನಡೆಸಲಿದೆ. ಮುಖ್ಯಮಂತ್ರಿಗಳ ಸಲಹೆ ಪಡೆದ ಬಳಿಕ ಯಾವ ವಿಭಾಗದಲ್ಲಿ ಯಾರನ್ನು ಸೇರಿಸಬೇಕು ಎಂಬ ಬಗ್ಗೆ ಅಂತಿಮ ನಿರ್ಧಾರವಾಗಲಿದೆ.

  • ಮೊದಲ ಉಪ-ವಿಭಾಗವು ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ಯಾವುದನ್ನು ಮುಂದುವರಿಸಬೇಕು, ಯಾವುದನ್ನು ಕೈಬಿಡಬೇಕು ಮತ್ತು ಯಾವುದರ ಅನುಷ್ಠಾನವನ್ನು ರಾಜ್ಯಗಳಿಗೆ ಹೊರಿಸಬೇಕು ಎಂಬಬಗ್ಗೆ ನಿರ್ಧರಿಸಲಿದೆ
  • ಎರಡನೇ ಉಪ-ವಿಭಾಗವು ಮಾನವ ಸಂಪನ್ಮೂಲ ಅಭಿವೃದ್ಧಿಯ ಆಧಾರದಲ್ಲಿ ಪ್ರತಿಯೊಂದು ರಾಜ್ಯಕ್ಕೂ ಯಾವ ರೀತಿಯ ಅಗತ್ಯತೆಗಳು ಬೇಕಿವೆ ಎಂಬುದನ್ನು ನಿರ್ಧರಿಸಲಿವೆ
  • ಮೂರನೇ ಉಪ-ವಿಭಾಗವು ಸ್ವಚ್ಛ ಭಾರತ ಅಭಿಯಾನ ನೋಡಿಕೊಳ್ಳಲಿದೆ. ಅಭಿಯಾನ ಅನುಷ್ಠಾನಕ್ಕೆ ತೆಗೆದುಕೊಳ್ಳಬೇಕಾದ ಹೆಜ್ಜೆಗಳು, ಇದಕ್ಕೆ ಬೇಕಾದ ತಂತ್ರಜ್ಞಾನ ಸಂಬಂಧಿ ಸಲಹೆಗಳನ್ನು ಈ ವಿಭಾಗ ನೀಡಲಿದೆ. ಇದರ ಜತೆಗೆ ರಾಜ್ಯಗಳು ಮುಂದಿಟ್ಟಿರುವ ಬೇಡಿಕೆಯಂತೆ ಹೆಚ್ಚಿನ ಹಣಕಾಸು ನೆರವು ಮತ್ತು ಹೆಚ್ಚಿನ ಅಧಿಕಾರ ನೀಡಲಾಗುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.
ಭಿನ್ನಮತ ಬಿಡಿ, ರಾಜ್ಯಗಳ ಅಭಿವೃದ್ಧಿಗೆ ಮುಂದಾಗಿ: ಪ್ರಧಾನಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com