ಬಿಹಾರ ಸರ್ಕಾರ ಸಂಘರ್ಷ ಶುರು

ಬಿಹಾರದಲ್ಲಿ ಗುರು-ಶಿಷ್ಯರ ಕಾಳಗ ಮುಂದುವರಿದಿದೆ. ಮಾಜಿ ಸಿಎಂ ನಿತೀಶ್ ಕುಮಾರ್ ಹಾಗೂ ಹಾಲಿ ಸಿಎಂ...
ಬಿಹಾರ ಸರ್ಕಾರ ಸಂಘರ್ಷ ಶುರು

ಪಟನಾ: ಬಿಹಾರದಲ್ಲಿ ಗುರು-ಶಿಷ್ಯರ ಕಾಳಗ ಮುಂದುವರಿದಿದೆ. ಮಾಜಿ ಸಿಎಂ ನಿತೀಶ್ ಕುಮಾರ್ ಹಾಗೂ ಹಾಲಿ ಸಿಎಂ ಜಿತನ್ ರಾಂ ಮಾಂಝಿ ನಡುವೆ ಶಕ್ತಿ ಪ್ರದರ್ಶನದ ತಿಕ್ಕಾಟ ಪ್ರಾರಂಭವಾಗಿದೆ.

ಸೋಮವಾರ ಬಿಹಾರ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಅವರನ್ನು ಭೇಟಿ ಮಾಡಿದ ನಿತೀಶ್ 130 ಶಾಸಕರ ಬೆಂಬಲ ಪತ್ರವನ್ನು ನೀಡಿ ನೂತನ ಸರ್ಕಾರ ರಚನೆಗೆ ಅವಕಾಶ ಕೊಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಮಾಂಝಿ, ನನಗೂ ಶಾಸಕರ ಬೆಂಬಲವಿದೆ, ಅಸೆಂಬ್ಲಿಯಲ್ಲಿ ಬಹುಮತ ಸಾಬೀತುಪಡಿಸುವೆ ಎಂದಿದ್ದಾರೆ.

ಟಿ ನಿತೀಶ್ ಆಕ್ರೋಶ ರಾಜಭವನಕ್ಕೆ ಸೋಮವಾರ ಆಗಮಿಸಿದ ಜೆಡಿಯು ಮುಖಂಡ ನಿತೀಶ್ ಕುಮಾರ್ ಅವರು ತಮ್ಮ ಕಾರಿನಲ್ಲಿ ಹಳೆಯ ವೈರಿ ಆರ್‍ಜೆಡಿ ನಾಯಕ ಲಾಲು ಪ್ರಸಾದ್ ಯಾದವ್‍ರನ್ನು ಕರೆತಂದಿದ್ದರು. ಈ ಸಂದರ್ಭದಲ್ಲಿ ರಾಜ್ಯಪಾಲ ರನ್ನು ಭೇಟಿ ಮಾಡಿದ ಉಭಯ ನಾಯಕರು ಗಂಟೆ ಕಾಲ ಚರ್ಚೆ ನಡೆಸಿದರು.

ಬಳಿಕ ಮಾತನಾಡಿದ ನಿತೀಶ್, ಜೆಡಿಯು ನೇತೃತ್ವದ ತಮ್ಮ ನಾಯಕತ್ವಕ್ಕೆ 130 ಶಾಸಕರ ಬೆಂಬಲವಿದೆ. ಹೀಗಾಗಿ ಕೂಡಲೇ ಸರ್ಕಾರ ರಚನೆಗಾಗಿ ಬಹುಮತ ಸಾಬೀತುಪಡಿಸಲು ಅವಕಾಶ ಕೊಡಬೇಕೆಂದು ವಿನಂತಿಸಿದ್ದಾರೆ. ಒಂದು ವೇಳೆ ವಿಳಂಬ ಮಾಡಿದಲ್ಲಿ ರಾಷ್ಟ್ರಪತಿ ಭವನದ ಮುಂದೆ ಜೆಡಿಯು, ಆರ್‍ಜೆಡಿ, ಕಾಂಗ್ರೆಸ್, ಸಿಪಿಐ ಮತ್ತು ಒಬ್ಬ ಪಕ್ಷೇತರ ಬೆಂಬಲಿತ ಶಾಸಕರ ಜತೆ ಪರೇಡ್ ನಡೆಸುವುದಾಗಿಯೂ ಎಚ್ಚರಿಸಿದ್ದಾರೆ.

ನಮಗೆ ಬಹುಮತ ಮಂಡಿಸಲು ರಾಜ್ಯಪಾಲರು 24 ಅಥವಾ 48ಗಂಟೆಗಳ ಗಡುವನ್ನು ಕೊಡಲಿ. ನಾವು ಸಾಬೀತುಪಡಿಸುತ್ತೇವೆ. ಆದರೆ, ಹೊಸ ಸರ್ಕಾರ ಫೆ..20ರಿಂದ ಪ್ರಾರಂಭವಾಗುವ ಬಜೆಟ್  ಅಧಿವೇಶನದೊಳಗೆ ರಚನೆಯಾಗಬೇಕು.

ಹೀಗಾಗಿ ರಾಜ್ಯಪಾಲರು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಶರದ್ ಯಾದವ್ ಸಹ ಇದ್ದರು. ಮಾಂಝಿ ತಿರುಗೇಟು: ನಿತೀಶ್ ಬಳಿಕ ರಾಜ್ಯಪಾಲರ ಭೇಟಿ ಮಾಡಿದ ಜಿತನ್ ಮಾಂಝಿ 45 ನಿಮಿಷಕ್ಕೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು, ತಮಗೂ ಶಾಸಕರ ಬೆಂಬಲವಿದೆ. ಬಹುಮತವನ್ನೂ ಸಾಬೀತುಪಡಿಸುವೆ. ಆದರೆ, ಸರ್ಕಾರ ರಚನೆಗೆ ನಿತೀಶ್ ಕುಮಾರ್ ಅವಕಾಶ ಕೋರಿರುವುದು ಅಸಾಂವಿಧಾನಿಕ ಕ್ರಮ ಎಂದಿದ್ದಾರೆ. ಬಹುಮತ ಸಾಬೀತುಪಡಿಸಲು ಗುಪ್ತ ಮತದಾನ ನಡೆಸಲು ಅವಕಾಶ ನೀಡಬೇಕು ಮತ್ತು ಮತ ಎಣಿಕೆ ಸಂದರ್ಭದಲ್ಲಿ ಪ್ರತಿಪಕ್ಷಗಳ ಒಬ್ಬೊಬ್ಬರು ಮುಖಂಡರು ಹಾಜರಿರಬೇಕು ಎಂದು ರಾಜ್ಯಪಾಲರಲ್ಲಿ ಮನವಿ ಮಾಡಿದ್ದಾಗಿ ತಿಳಿಸಿದರು.

ನಿತೀಶ್ ಶಾಸಕಾಂಗ ಪಕ್ಷದ ಸದಸ್ಯರೇ ಅಲ್ಲ. ಹೀಗಾಗಿ ಅವರನ್ನು ನಾಯಕರನ್ನಾಗಿ ಹೇಗೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿರುವ ಮಾಂಝಿ, ಈಗ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬುದು ರಾಜ್ಯಪಾಲರ ವಿವೇಚನೆಗೆ ಬಿಟ್ಟಿದ್ದು ಎಂದಿದ್ದಾರೆ. ಮಾಂಝಿ ಉಚ್ಚಾಟನೆ: ಉಪ ಮುಖ್ಯಮಂತ್ರಿ ಹುದ್ದೆ ಕೊಟ್ಟರೆ, ಜೆಡಿಯುಗೆ ಬೆಂಬಲ ನೀಡುವುದಾಗಿ ಹೇಳಿಕೆ ನೀಡುವ ಮೂಲಕ ಸಿಎಂ ಜಿತನ್ ಮಾಂಝಿ ಅಚ್ಚರಿಯ ಹೇಳಿಕೆ ನೀಡಿದ್ದರು. ಆದರೆ, ಡಿಸಿಎಂ ಸ್ಥಾನ ನೀಡದಿದ್ದರೆ ಸಿಎಂ ಸ್ಥಾನ ಬಿಟ್ಟುಕೊಡುವುದು ಅಸಾಧ್ಯ ಎಂಬ ಷರತ್ತನ್ನು ವಿಧಿಸಿದ್ದರು. ಈ ಮೂಲಕ ಒಂದು ಹಂತದಲ್ಲಿ ಮೆತ್ತಗಾದಂತೆ ಕಂಡು ಬಂದರೂ ಪಟ್ಟು ಬಿಡದಿದ್ದರಿಂದ ಪಕ್ಷದ ಅಧ್ಯಕ್ಷ  ಶರದ್ ಯಾದವ್ ನೇತೃತ್ವದಲ್ಲಿ ಸಭೆ ನಡೆಸಿದ ಜೆಡಿಯು ಮಾಂಝಿಯನ್ನು ಉಚ್ಚಾಟನೆ ಮಾಡಿತು.

140 ಸೀಟ್: ಜೆಡಿಯು ತನ್ನ ಹಾಗೂ ಬೆಂಬಲಿತ ಶಾಸಕರು ವಿಮಾನ ಮೂಲಕ ದೆಹಲಿಗೆ ತೆರಳಲು 140 ಸೀಟು ಕಾಯ್ದಿರಿಸಿದೆ. ದೆಹಲಿಗೆ ತೆರಳಿದ ರಾಜ್ಯಪಾಲ: ರಾಜ್ಯಪಾಲ
ಕೇಸರಿನಾಥ್ ತ್ರಿಪಾಠಿ ಸೋಮವಾರ ಸಂಜೆ ದೆಹಲಿಗೆ ತೆರಳಿದ್ದಾರೆ. ಈ ವೇಳೆ ಬಿಹಾರದ ರಾಜಕೀಯ ಬೆಳವಣಿಗೆ ಬಗ್ಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಮಾಹಿತಿ ನೀಡಲಿದ್ದಾರೆ. ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ಮಾಡಲು ಅವಕಾಶ ನೀಡಬೇಕು ಎಂದು ಸಿಎಂ ಜಿತನ್ ಮಾಂಝಿ ಮಾಡಿದ್ದ ಮನವಿಯನ್ನು ಅವರು ತಿರಸ್ಕರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com