ಅಕ್ರಮವಾಗಿ 2 ದಿನ ಹೊರಗಿದ್ದ ಸಂಜಯ್ ದತ್...!
ಮುಂಬೈ: ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ನಟ ಸಂಜಯ್ ದತ್ ಪೆರೋಲ್ ಅವಧಿಯನ್ನು ಮೀರಿ 2 ದಿನ ಹೆಚ್ಚುವರಿಯಾಗಿ ಜೈಲಿನ ಹೊರಗಿದ್ದರು ಎಂದು ಮಹಾರಾಷ್ಟ್ರ ಬಂಧೀಖಾನೆ ಅಧಿಕಾರಿಗಳು ವರದಿ ನೀಡಿದ್ದಾರೆ.
ರಾಜ್ಯ ಗೃಹ ಇಲಾಖೆಗೆ ಈ ಬಗ್ಗೆ ವರದಿ ಸಲ್ಲಿಸಿರುವ ಹೆಚ್ಚುವರಿ ಬಂಧೀಖಾನೆ ಪೊಲೀಸ್ ಮಹಾ ನಿರ್ದೇಶಕ ಮೀರಾನ್ ಬೋರ್ವಾನ್‌ಕರ್ ಅವರುಸ, ದತ್ ಪೆರೋಲ್ ರಜೆ ಕುರಿತ ಗೊಂದಲಗಳಿಗೆ ಮುಂಬಯಿ ಪೊಲೀಸರು ಮತ್ತು ಬಂಧೀಖಾನೆ ಅಧಿಕಾರಿಗಳ ನಡುವೆ ಸರಿಯಾಗಿ ಹೊಂದಾಣಿಕೆ ಇಲ್ಲದಿರುವುದೇ ಇದಕ್ಕೆ ಕಾರಣವೆಂದು ಅಭಿಪ್ರಾಯಪಟ್ಟಿದ್ದಾರೆ.
ಅನಾರೋಗ್ಯದ ನೆಪವೊಡ್ಡಿ ಜೈಲಿನಿಂದ 14 ದಿನಗಳ ಕಾಲ ರಜೆ ಪಡೆದು ಮನೆಗೆ ಹೋಗಿದ್ದ ಸಂಜಯ್ ದತ್, ಆ ಬಳಿಕ ಅನಧಿಕೃತವಾಗಿ ಎರಡು ದಿನ ಹೆಚ್ಚುವರಿಯಾಗಿ ಜೈಲುವಾಸ ತಪ್ಪಿಸಿಕೊಂಡಿದ್ದರು. 3 ದಿನಗಳ ಹಿಂದೆ ನಾನು ಗೃಹ ಇಲಾಖೆಗೆ ಈ ಬಗ್ಗೆ ವರದಿಯನ್ನು ಸಲ್ಲಿಸಿದ್ದು, ಬಂಧೀಖಾನೆ ನಿಯಮಗಳನ್ನು ಉಲ್ಲಂಘಿಸಿ ಸಂಜಯ್ ದತ್ ಅವರು 2 ದಿನ ಅಕ್ರಮವಾಗಿ ಜೈಲಿನಿಂದ ಹೊರಗಿದ್ದರು. ಜೈಲು ನಿಯಮಗಳನ್ನು ಯಾರೇ ಉಲ್ಲಂಘಿಸಿದರೂ ಅವರು ಶಿಸ್ತು ಕ್ರಮ ಎದುರಿಸಲೇಬೇಕು ಎಂದು ಬೋರ್ವಾನ್‌ಕರ್ ಹೇಳಿದರು.
ದತ್ ಜೈಲು ರಜೆಯಲ್ಲಿ 10 ದಿನ ಕಡಿತ ಸಾಧ್ಯತೆ
ಇನ್ನು ಪೆರೋಲ್ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಂಜಯ್ ದತ್ ಅವರಿಗೆ ದಂಡ ವಿಧಿಸುವ ಸಾಧ್ಯತೆಗಳಿವೆ. ಯರವಾಡ ಜೈಲು ಅಧಿಕಾರಿಯೊಬ್ಬರು ತಿಳಿಸಿರುವಂತೆ ದತ್ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸುವ ಸಾಧ್ಯತೆ ಇದ್ದು, ಅವರ ಮುಂದಿನ ಜೈಲು ರಜೆ ಅವಧಿಯಲ್ಲಿ ಸುಮಾರು 10ದಿನಗಳ ಕಡಿತವಾಗುವ ಶಿಕ್ಷೆ ವಿಧಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಾಲಿವುಡ್ ನಟ ದತ್ ಅವರು 1993ರ ಮುಂಬಯಿ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಅಪರಾಧಕ್ಕಾಗಿ ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ