ಶಾಲಾ ಸಿಬ್ಬಂದಿಯಿಂದಲೇ ಬೆತ್ತಲೆ ಚಿತ್ರ: ಹಾಸ್ಟೆಲ್ ತೊರೆದ ಒಡಿಶಾ ವಿದ್ಯಾರ್ಥಿನಿಯರು

ಸಾಂಧರ್ಬಿಕ ಚಿತ್ರ
ಸಾಂಧರ್ಬಿಕ ಚಿತ್ರ

ಬೆರಾಂಪುರ್: ವಿದ್ಯಾರ್ಥಿನಿಯರ ಬೆತ್ತಲೆ ಫೋಟೋ ಕ್ಲಿಕ್ಕಿಸುವ ಸರ್ಕಾರಿ ಬಾಲಕೀಯರ ಶಾಲೆಯ ಸಿಬ್ಬಂದಿಯ ಕೆಟ್ಟ ಚಾಳಿಗೆ ಬೇಸತ್ತು ಸುಮಾರು 60ಕ್ಕು ಹೆಚ್ಚು ವಿದ್ಯಾರ್ಥಿನಿಯರು ಸಾಮೂಹಿಕವಾಗಿ ವಸತಿ ನಿಲಯ ತೊರೆದಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

ಒಡಿಶಾದ ಗಂಜಾಮ್ ಜಿಲ್ಲೆಯ ಗುಡಿಹಳ್ಳಿಯಲ್ಲಿರುವ ಕಸ್ತೂರಿಬಾ ಗಾಂಧಿ ಬಾಲಿಕಾ ವಿದ್ಯಾಲಯ(ಬಿಜಿವಿಬಿ)ದ ಖಜಾಂಚಿ ವಸತಿ ನಿಲಯದ ಅಡುಗೆ ಸಹಾಯಕಿಯ ನೆರವಿನಿಂದ ವಿದ್ಯಾರ್ಥಿನಿಯರ ಬೆತ್ತಲೆ ಫೋಟೋ ತೆಗೆದಿದ್ದು, ಆತನ ಮೊಬೈಲ್‌ನಿಂದ ಸುಮಾರು 22ಕ್ಕು ಹೆಚ್ಚು ಬೆತ್ತಲೆ ಮತ್ತು ಅರೆ ಬೆತ್ತಲೆ ಚಿತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಶಾಲಾ ಮುಖ್ಯಸ್ಥೆ ಟಿ ಅನ್ನಪೂರ್ಣ ಪತ್ರ ಅವರು ಸರ್ವ ಶಿಕ್ಷಣ ಅಭಿಯಾನ(ಎಸ್‌ಎಸ್‌ಎ)ದ ಜಿಲ್ಲಾ ಸಂಚಾಲಕ ಸುದಾಮ್ ಮಂಡಲ್ ಅವರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಘಟನೆ ಸಂಬಂಧ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಶ್.ಸಿ.ದಾಸ್ ಅವರು ಖಜಾಂಚಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಖಜಾಂಚಿ ಹಾಗೂ ವಸತಿ ನಿಲಯದ ಅಡುಗೆ ಸಹಾಯಕಿ ಕೆಲಸಕ್ಕೆ ರಾಜಿನಾಮೆ ನೀಡಿದ್ದಾರೆ. ಆದರೆ ಘಟನೆ ಹಿನ್ನೆಲೆಯಲ್ಲಿ ವಸತಿ ನಿಲಯದ ವಾರ್ಡನ್ ದೀರ್ಘಾವಧಿ ರಜೆಯ ಮೇಲೆ ತೆರಳಿದ್ದಾರೆ.

ಹಾಸ್ಟೇಲ್‌ನಲ್ಲಿ ವಾಸವಿದ್ದ ಒಟ್ಟು 87 ವಿದ್ಯಾರ್ಥಿನಿಯರ ಪೈಕಿ ಸುಮಾರು 60 ವಿದ್ಯಾರ್ಥಿನಿಯರು ಮಂಗಳವಾರವೇ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com