
ಝಬುವಾ: ಮಧ್ಯ ಪ್ರದೇಶದ ಝಬುವಾದಲ್ಲಿ ಖಾಸಗಿ ಬಸ್ ಕಣಿವೆಗೆ ಉರುಳಿದ ಪರಿಣಾಮ ಕನಿಷ್ಠ 10 ಮಂದಿ ಪ್ರಯಾಣಿಕರು ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಸೋಮವಾರ ತಡರಾತ್ರಿ ಇಂದೋರ್ ನಿಂದ ರಾಜಸ್ತಾನದ ಗಾಲಿಕಾಟ್ ಗೆ ತೆರಳುತ್ತಿದ್ದ ಖಾಸಗಿ ಬಸ್ ಮಧ್ಯಪ್ರದೇಶದ ಝಬುವಾದ ಮಚಲಿಯಾ ಘಾಟ್ ಬಳಿ ಬಸ್ ಕಣಿವೆಗೆ ಉರುಳಿದೆ. ಘಟನೆಯಲ್ಲಿ ಕನಿಷ್ಠ 10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮಚಲಿಯಾಘಾಟ್ ಬಳಿ ಬಸ್ ತೆರಳುತ್ತಿದ್ದ ವೇಳೆ ಬಸ್ ಚಾಲಕನ ನಿಯಂತ್ರಣ ತಪ್ಪಿದ್ದು, ಅಳವಾದ ಕಣಿವೆಗೆ ಬಿದ್ದಿದೆ. ಬಸ್ ನಲ್ಲಿ ಸುಮಾರು 55ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿ ಮತ್ತು ಪೊಲೀಸರು ದೌಡಾಯಿಸಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಘಟನಾ ಸ್ಥಳಕ್ಕೆ ಸ್ಥಳೀಯ ಅಧಿಕಾರಿಗಳು ದೌಡಾಯಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಝಬುವಾ ಸರ್ಕಾರಿ ಆಸ್ಪತ್ರೆ ವೈಧ್ಯಾಧಿಕಾರಿ ಆರ್ ಜಿ ಕೌಶಲ್ ಅವರು, ಪ್ರಸ್ತುತ 6 ಮೃತ ದೇಹಗಳನ್ನು ದಾಖಲಿಸಿಕೊಳ್ಳಲಾಗಿದೆ. 40ಕ್ಕೂ ಹೆಚ್ಚು ಮಂದಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
Advertisement