
ನವದೆಹಲಿ: ಬಿಜೆಪಿ ಮುಖಂಡ ಮತ್ತು ಪಕ್ಷದ ಮಾಹಿತಿ ತಂತ್ರಜ್ಞಾನ ವಿಭಾಗದ ಸ್ಥಾಪಕ ಪ್ರದ್ಯುತ್ ಬೋರಾ ಅವರು ಗುರುವಾರ ಬಿಜೆಪಿ ರಾಜಿನಾಮೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಕಾರ್ಯವೈಖರಿಯಿಂದ ಬೇಸರಗೊಂಡು ಪ್ರದ್ಯುತ್ ಬೋರಾ ಅವರು ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿಯಲ್ಲಿ ಅತ್ಯಂತ ಯಶಸ್ವೀ ಮಾಹಿತಿ ತಂತ್ರಜ್ಞಾನ ವಿಭಾಗವನ್ನು ಸ್ಥಾಪಿಸಿ ಅದನ್ನು ಪರಿಣಾಮಕಾರಿಯಾಗಿ ಮುನ್ನಡೆಸಿಕೊಂಡು ಬಂದಿದ್ದ ಅಸ್ಸಾಮಿನ ಯುವ ಬಿಜೆಪಿ ನಾಯಕ ಪ್ರದ್ಯುತ್ ಬೋರಾ ಅವರು ಇಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಸರ್ಕಾರ ಮತ್ತು ಪಕ್ಷದಲ್ಲಿ ತೀವ್ರವಾಗಿರುವ ಪ್ರಜಾತಾಂತ್ರಿಕ ಪರಂಪರೆಯನ್ನು ಬುಡಮೇಲು ಮಾಡುವ ಪ್ರವೃತ್ತಿಯಿಂದ ಭ್ರಮನಿರಸನಗೊಂಡು ಬೋರಾ ಅವರು ರಾಜಿನಾಮೆ ನೀಡಿದ್ದಾರೆ ಎಂದು ಅವರ ಬೆಂಬಲಿಗರು ಹೇಳಿದ್ದಾರೆ.
ಸುಮಾರು ನಾಲ್ಕು ಪುಟಗಳ ತಮ್ಮ ರಾಜೀನಾಮೆ ಪತ್ರದಲ್ಲಿ ಬೋರಾ ಅವರು ಬಿಜೆಪಿಗೆ ಮುಜುಗರ ಉಂಟುಮಾಡಬಲ್ಲ ಪ್ರಶ್ನೆಗಳನ್ನು ಕೇಳಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ. ಮೋದಿ ಅವರು ದೇಶದಲ್ಲಿನ ಪ್ರಜಾತಾಂತ್ರಿಕ ಪರಂಪರೆಗೆ ಹಾನಿಯುಂಟುಮಾಡಿದ್ದು, ತಮ್ಮ ಸಚಿವ ಸಂಪುಟ ವ್ಯವಸ್ಥೆಯಲ್ಲಿನ ಸಮಾನರಲ್ಲಿ ಮೊದಲಿಗರಾಗಿದ್ದಾರೆಯೇ ವಿನಾಃ ಅಸಮಾನರಲ್ಲಿ ಮೊದಲಿಗರಾಗಿಲ್ಲ ಎಂದು ಬೋರಾ ಟೀಕಿಸಿದ್ದಾರೆ.
ಬಿಜೆಪಿ ಪಕ್ಷ ಕೂಡ ಇತರೆ ಪಕ್ಷಗಳಿಗಿಂತ ಈಗ ಭಿನ್ನವಾಗಿಯೇನೂ ಉಳಿದಿಲ್ಲ. ಪಕ್ಷದಲ್ಲೀಗ ಯಾವುದೇ ರೀತಿಯಲ್ಲಾದರೂ ಜಯಿಸಬೇಕು ಎನ್ನುವ ಏಕೈಕ ಆಶಯವೇ ತೀವ್ರವಾಗಿದೆ ಮತ್ತು ಇಂತಹ ಹಂಬಲವು ಪಕ್ಷದ ಮೂಲ ತತ್ವಗಳನ್ನು ಧೂಳೀಪಟ ಮಾಡುತ್ತಿದೆ. ಪಕ್ಷದ ಈಗಿನ ಸ್ವರೂಪ ಮತ್ತು ಕಾರ್ಯಶೈಲಿಯಿಂದಾಗಿ ನಾನೀಗ ಭರವಸೆಯನ್ನು ಕಳೆದುಕೊಂಡಿದ್ದೇನೆ. ದೇಶಕ್ಕೆ ಬೇಕಾಗಿರುವುದ ವಿಭಿನ್ನ ರಾಜಕೀಯ ಪರ್ಯಾಯ ಪಕ್ಷ. ಒಂದೋ ಬಿಜೆಪಿಯು ಇದನ್ನು ತನ್ನಲ್ಲಿ ತಾನು ಕಂಡುಕೊಳ್ಳಬೇಕು, ಇಲ್ಲವೇ ಜನರೇ ಬೇರೆ ಆಯ್ಕೆಯನ್ನು ಕಂಡುಕೊಳ್ಳಲಿದ್ದಾರೆ ಎಂದು ಬೋರಾ ಆಕ್ರೋಶಭರಿತರಾಗಿ ಹೇಳಿದ್ದಾರೆ.
ನನಗೆ ಕಾಂಗ್ರೆಸ್‌ನ ಅಸ್ಸಾಂ ಘಟಕದಿಂದ, ಎಎಪಿಯಿಂದ ಮತ್ತು ಎಜಿಪಿಯಿಂದ ಆಹ್ವಾನ ಬಂದಿದೆ. ಆದರೆ ನಾನು ಆ ಆಹ್ವಾನಗಳನ್ನು ಸ್ವೀಕರಿಸುವ ಉತ್ಸುಕತೆ ಹೊಂದಿಲ್ಲ ಎಂದೂ ಬೋರಾ ಸ್ಪಷ್ಟಪಡಿಸಿದ್ದಾರೆ.
Advertisement