ಕೇಂದ್ರದಿಂದ ರಾಜ್ಯಗಳ ತೆರಿಗೆ ಪಾಲು ಹೆಚ್ಚಳ..!

ಕೇಂದ್ರ-ರಾಜ್ಯಗಳ ತೆರಿಗೆ ಹಂಚಿಕೆಯಲ್ಲಿ 2015-16ನೇ ಸಾಲಿನಿಂದ ರಾಜ್ಯಗಳ ಪಾಲು ಹೆಚ್ಚಾಗಲಿದ್ದು...ಪಾಲು ಹೆಚ್ಚಾಗುವ ಸಾಧ್ಯತೆ ಇದೆ.
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ (ಸಂಗ್ರಹ ಚಿತ್ರ)
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ (ಸಂಗ್ರಹ ಚಿತ್ರ)
Updated on

ನವದೆಹಲಿ: ಕೇಂದ್ರ-ರಾಜ್ಯಗಳ ತೆರಿಗೆ ಹಂಚಿಕೆಯಲ್ಲಿ 2015-16ನೇ ಸಾಲಿನಿಂದ ರಾಜ್ಯಗಳ ಪಾಲು ಹೆಚ್ಚಾಗಲಿದ್ದು, ಕೇಂದ್ರ ಸಂಗ್ರಹಿಸುವ ತೆರಿಗೆಯಲ್ಲಿ ರಾಜ್ಯಗಳಿಗೆ ಸಿಗುವ
ಪಾಲು ಹೆಚ್ಚಾಗುವ ಸಾಧ್ಯತೆ ಇದೆ.

ಈ ಹಿಂದೆ ರಾಜ್ಯಕ್ಕೆ ನೀಡಲಾಗುತ್ತಿದ್ದ ತೆರಿಗೆ ಪಾಲನ್ನು ಶೇ.32ರಿಂದ 42ಕ್ಕೆ ಏರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಸಾಲದ ಸುಳಿಯಲ್ಲಿ ಸಿಲುಕಿರುವ ಮತ್ತು ಪ್ರತಿ ವರ್ಷವೂ ವಿತ್ತೀಯ ಶಿಸ್ತು ಮೀರಿ ಸಾಲ ಮಾಡುತ್ತಿರುವ ರಾಜ್ಯಗಳಿಗೆ ಇದರಿಂದ ಹೆಚ್ಚು ಅನುಕೂಲ ಆಗಲಿದೆ. ಈ ಹೆಚ್ಚಳಕ್ಕೆ ಮುಖ್ಯ ಕಾರಣ ಆರ್‍ಬಿಐನ ನಿವೃತ್ತ ಗವರ್ನರ್ ವೈ.ವಿ. ರೆಡ್ಡಿ ನೇತತ್ವದ 14ನೇ ಹಣಕಾಸು ಆಯೋಗವು 2015-2020ರ ಅವಧಿಯಲ್ಲಿ ರಾಜ್ಯಗಳಿಗೆ ನೀಡುವ ತೆರಿಗೆ ಪಾಲನ್ನು ಈಗಿರುವ ಶೇ.32ರಿಂದ ಶೇ.42ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿತ್ತು. 14ನೇ ಹಣಕಾಸು ಆಯೋಗದ ಶಿಫಾರಸು ಜಾರಿಯ ಮೊದಲ ವರ್ಷ ತೆರಿಗೆ ಪಾಲಿನಲ್ಲಿ ವಿತ್ತ ಸಚಿವ ಅರುಣ್ ಜೆಟ್ಲಿ ಶೇ.2.5ರಷ್ಟು ಹೆಚ್ಚಳ ಮಾಡುವ ನಿರೀಕ್ಷೆ ಇದೆ.

ಬರುವ ಮುಂಬರುವ ವರ್ಷಗಳಲ್ಲಿ ಒಟ್ಟು ಶೇ.10 ರಷ್ಟು ಹೆಚ್ಚಳ ಆಗಲಿದೆ. ಆದರೆ, ಕೇವಲ ಬರೀ ತೆರಿಗೆಯಲ್ಲಿನ ಪಾಲು ಹೆಚ್ಚಿಸುವುದಷ್ಟೇ ಅಲ್ಲದೇ, ರಾಜ್ಯಗಳಿಗೆ ಹೆಚ್ಚಿನ ಪಾಲು ನೀಡಿದಷ್ಟೂ ಅವುಗಳ ಜವಾಬ್ದಾರಿ ಹೆಚ್ಚಿಸುವ ಕೆಲಸಕ್ಕೂ ಕೇಂದ್ರ ಸರ್ಕಾರ ಮುಂದಾಗಿದೆ. ಮೊದಲ ಹಂತದಲ್ಲಿ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಒದಗಿಸುತ್ತಿರುವ ಅನುದಾನವನ್ನು ಕಡಿತ ಮಾಡಲಿದೆ. ಈಗಾಗಲೇ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಮತ್ತು ವಿವಿಧ ಧಾನ್ಯಗಳ ಬೆಂಬಲ ಬೆಲೆಗೆ ಒದಗಿಸುತ್ತಿರುವ ಅನುದಾನ ಕಡಿತ ಮಾಡಿದೆ. ಬರುವ ದಿನಗಳಲ್ಲಿ ಶೇ. 100 ರಷ್ಟು ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ನೀಡುವ ಅನುದಾನವನ್ನು ಹಂತ ಹಂತವಾಗಿ ಕಡಿತ ಮಾಡಲಿದೆ. ಅದರರ್ಥ ರಾಜ್ಯಗಳ ಮೇಲಿನ ವಿತ್ತೀಯ ಹೊರೆ ಹೆಚ್ಚಾಗಲಿದೆ.

ಬೊಕ್ಕಸ ತುಂಬಲಿದೆ ತೆರಿಗೆ
ಬೊಕ್ಕಸ ತುಂಬಿಕೊಳ್ಳಲು ತೆರಿಗೆ ಹೆಚ್ಚಳ ಮಾಡುವುದು ಒಂದು ವಿಧಾನವಾದರೆ, ತೆರಿಗೆ ವ್ಯಾಪ್ತಿ ವಿಸ್ತರಿಸುವುದು ಮತ್ತೊಂದು ವಿಧಾನ. ಹಾಲಿ ತೆರಿಗೆ ಹೆಚ್ಚಿಸದೇ, ಆದರೆ, ತೆರಿಗೆ ವಿಧಿಸುವ ಸರಕು ಸೇವೆಗಳ ವ್ಯಾಪ್ತಿಯನ್ನು ವಿಸ್ತರಿಸುವುದರಿಂದ ದೀರ್ಘ ಕಾಲದಲ್ಲಿ ತೆರಿಗೆ ಸಂಗ್ರಹ ವ್ಯವಸ್ಥಿತವಾಗಿ ಹೆಚ್ಚುತ್ತದೆ. ನರೇಂದ್ರ ಮೋದಿ ಅವರ ಕನಸಾದ ಮೇಕ್ ಇನ್
ಇಂಡಿಯಾ ವಾಸ್ತವವಾಗಿ ವಿತ್ತ ಸಚಿವರ ಹೇಗಲನ್ನೇರಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸುವುದು ವಿತ್ತ ಸಚಿವ ಅರುಣ್ ಜೇಟ್ಲಿ ಜವಾಬ್ದಾರಿಯಾಗಿದೆ.. ಅದಕ್ಕಾಗಿ ಜೇಟ್ಲಿ ಮುಂದಿರುವ ಕಾರ್ಯತಂತ್ರ ತಮ್ಮ ತೆರಿಗೆ ಜೋಳಿಗೆಯನ್ನು ವಿಸ್ತರಿಸುವುದು.

ಪ್ರಸ್ತುತ 250 ವಸ್ತುಗಳು ಅಬಕಾರಿ ತೆರಿಗೆ ವ್ಯಾಪ್ತಿಯಿಂದ ಹೊರಗೆ ಇವೆ. ಅಬಕಾರಿ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ವಸ್ತುಗಳ ಸಂಖ್ಯೆಯನ್ನು 250ರಿಂದ 200ಕ್ಕೆ ತಗ್ಗಿಸುವ ನಿರೀಕ್ಷೆ ಇದೆ. ಅಂದರೆ, ಹೊಸದಾಗಿ 50 ವಸ್ತುಗಳು ಈ ತೆರಿಗೆ ವ್ಯಾಪ್ತಿಗೆ ಬರಲಿವೆ ಎಂದು ಹೇಳಲಾಗುತ್ತಿದೆ. ಉದಾಹರಣೆಗೆ ಹಾಲು ಆಧಾರಿತ ಆಹಾರಗಳು, ಹಾಲಿನ ಪುಡಿ, ಖಾದ್ಯ ತೈಲ, ಪಿಜ್ಜಾಗೆ ಬಳಸುವ ಬ್ರೆಡ್, ಕಾಟೆಜ್ ಚೀಸ್, ನಾನ್ ಎಲೆಕ್ಟ್ರಾನಿಕ್ ಆಟಿಕೆಗಳು, ಟ್ರ್ಯಾಕ್ಟರ್ ಇತ್ಯಾದಿ. ಇವೆಲ್ಲವೂ ಈಗ ಶೂನ್ಯ ತೆರಿಗೆ ವ್ಯಾಪ್ತಿಯಲ್ಲಿವೆ. ಆದರೆ, ರಾಜ್ಯ ಸರ್ಕಾರಗಳು ಅವುಗಳ ಮೇಲೆ ಶೇ.5ರಷ್ಟು ಮಾತ್ರ ಮೌಲ್ಯಾಧಾರಿತ ತೆರಿಗೆ ವಿಧಿಸುತ್ತಿದೆ. ಇವುಗಳ ಜತೆಗೆ ಅಬಕಾರಿ ತೆರಿಗೆ ವ್ಯಾಪ್ತಿಯಲ್ಲಿದ್ದರೂ ಗರಿಷ್ಠ ಶೇ.12ರಷ್ಟು ತೆರಿಗೆ ವಿಧಿಸದೇ ಇರುವ ಹಲವು ಸರಕುಗಳಿಗೆ ಗರಿಷ್ಠ ತೆರಿಗೆ ಹೇರುವ ಆಲೋಚನೆ ವಿತ್ತ ಸಚಿವರದ್ದು.

ಮೇಕ್ ಇನ್ ಇಂಡಿಯಾ ಸಾಕಾರಗೊಳಿಸುವ ನಿಟ್ಟಿನಲ್ಲಿ ದೇಶಿಯಾ ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡಲು ಈಗ ವಿಧಿಸುತ್ತಿರುವ ವಿಶೇಷ ಹೆಚ್ಚುವರಿ ತೆರಿಗೆ (ಸ್ಪೆಷಲ್ ಅಡಿಷನಲ್ ಡ್ಯೂಟಿ- ಎಸ್‍ಎಡಿ)ಯನ್ನು ಈಗ ಇರುವ ಶೇ. 4ರಿಂದ ಶೇ. 2ಕ್ಕೆ ತಗ್ಗಿಸುವ ನಿರೀಕ್ಷೆ ಇದೆ. ಇದರಿಂದ ದೇಶೀಯ ಉತ್ಪಾನ್ನಗಳ ಉತ್ಪಾದನಾ ವೆಚ್ಚ ತಗ್ಗಲಿದ್ದು, ದರ ಇಳಿಕೆಯಾಗಿ ಅವುಗಳ ಮಾರಾಟ ಹೆಚ್ಚಳವಾಗಲಿದೆ.

ಹಣಕಾಸು ಆಯೋಗದ ಶಿಫಾರಸನ್ನು ಒಪ್ಪುವ ಮೂಲಕ ಪ್ರಧಾನಿ ಮೋದಿ ಅವರು ಸಹಕಾರ ಒಕ್ಕೂಟ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಪ್ರತಿಪಾದಿಸಿದ್ದಾರೆ.
- ಅರುಣ್ ಜೇಟ್ಲಿ, ವಿತ್ತ ಸಚಿವ

ನೈಜ ಮತ್ತು ಕಾರ್ಯನಿರತ ಒಕ್ಕೂಟ ವ್ಯವಸ್ಥೆಯುಳ್ಳ ಆಡಳಿತವು ತ್ವರಿತ ಹಾಗೂ ಎಲ್ಲರನ್ನೊಳಗೊಂಡ ಪ್ರಗತಿ ಸಾಧಿಸಲು ಇರುವ ಏಕೈಕ ಮಾರ್ಗವಾಗಿದೆ. ಬಲಿಷ್ಠ ರಾಜ್ಯಗಳು ಬಲಿಷ್ಠ ಭಾರತದ ಅಡಿಪಾಯ. ಹಾಗಾಗಿ ನಮ್ಮ ಸರ್ಕಾರವು ಎಲ್ಲ ರೀತಿಯಿಂದಲೂ ರಾಜ್ಯಗಳ ಸಬಲೀಕರಣಗೊಳಿಸಲು ಬದ್ಧವಾಗಿದೆ.  
- ನರೇಂದ್ರ ಮೋದಿ, ಪ್ರಧಾನಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com