
ನವದೆಹಲಿ: ಭೂಸ್ವಾಧೀನ ಸುಗ್ರೀವಾಜ್ಞೆ ಸಂಸತ್ ನಲ್ಲಿ ಕೋಲಾಹಲಕ್ಕೆ ಕಾರಣ ವಾಗಿರುವಂತೆಯೇ ಕೇಂದ್ರ ಸರ್ಕಾರ ಸಂಸತ್ ನಲ್ಲಿ ಗುರುವಾರ ಕಲ್ಲಿದ್ದಲು ತಿದ್ದುಪಡಿ ಹಾಗೂ ಪೌರತ್ವ ವಿಧೇಯಕಗಳನ್ನು ಮಂಡಿಸಲು ನಿರ್ಧರಿಸಿದೆ.
ಅದಕ್ಕೆ ಪೂರಕವಾಗಿ ರಾಜ್ಯಸಭೆಯಿಂದ ಹಳೆಯ ವಿಧೇಯಕ ವಾಪಸಿಗೆ ನೋಟಿಸ್ ನೀಡಿದೆ. ಆದರೆ, ಪ್ರತಿಪಕ್ಷಗಳು ಈ ಪ್ರಯತ್ನಕ್ಕೆ ಅಡ್ಡಿಮಾಡುವ ಸಾಧ್ಯತೆಗಳೇ ಹೆಚ್ಚು, ಹೀಗಾಗಿ ಮತ್ತೊಮ್ಮೆ ಸಂಸತ್ ನಲ್ಲಿ ಆಡಳಿತ ಪ್ರತಿಪಕ್ಷಗಳ ನಡುವೆ ಮತ್ತೊಂದು ಸಂಘರ್ಷ ವೇದಿಕೆ ಸಿಗುವುದು ಬಹುತೇಕ ಖಚಿತವಾಗಿದೆ.
ಕೈ ಹೋರಾಟ: ಪ್ರಮುಖ ನಾಯಕರಾಗಿರುವ ಸೋನಿಯಾ ಮತ್ತು ರಾಹುಲ್ ಅನುಪಸ್ಥಿತಿ ಮಧ್ಯೆಯೂ ಕೈ ನಾಯಕರು ಸಂಸತ್ತಿನ ಒಳಗೆ ಮತ್ತು ಹೊರಗೆ ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸಿದ್ದಾರೆ. ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರ ಎರಡು ದಿನಗಳ ಪ್ರತಿಭಟನೆ ಮುಕ್ತಾಯಗೊಂಡ ಬೆನ್ನಲ್ಲೇ ಜಂತರ್ಮಂತರ್ ನಲ್ಲಿ ಕಾಂಗ್ರೆಸ್ `ಜಮೀನ್ ವಾಪ್ಸಿ ಆಂದೋಲನ್' ಆರಂಭಿಸಿದೆ. ಈ ವೇಳೆ ಮೋದಿ ಸರ್ಕಾರವನ್ನು `ರೈತ ವಿರೋಧಿ' ಎಂದು ಕರೆದಿರುವ ಕಾಂಗ್ರೆಸ್ ಮುಖಂಡರು, ವಿವಾದಾತ್ಮಕ ಸುಗ್ರೀವಾಜ್ಞೆ ವಿರುದ್ಧ ದೇಶಾದ್ಯಂತ ಹೋರಾಟ ನಡೆಸುವ ಶಪಥ ಮಾಡಿದ್ದಾರೆ.
Advertisement