ರಾಜ್ಯ ಬಿಜೆಪಿಗಿಂದು ಅಮಿತ್ ಶಾ ಕ್ಲಾಸ್

ರಾಜ್ಯ ಬಿಜೆಪಿಗೆ ಶನಿವಾರ ಅಮಿತ್ ಶಾ 'ಕ್ಲಾಸ್‌' ತೆಗೆದುಕೊಳ್ಳಲಿದ್ದಾರೆ...
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ

ಬೆಂಗಳೂರು: ರಾಜ್ಯ ಬಿಜೆಪಿಗೆ ಶನಿವಾರ ಅಮಿತ್ ಶಾ 'ಕ್ಲಾಸ್‌' ತೆಗೆದುಕೊಳ್ಳಲಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಮೊದಲ ಬಾರಿಗೆ ಅಮಿತ್ ಶಾ ಪಾಲ್ಗೊಳ್ಳುತ್ತಿದ್ದು, ಶುಕ್ರವಾರ ರಾತ್ರಿ ನಗರಕ್ಕೆ ಆಗಮಿಸಿದ್ದಾರೆ.

ಶನಿವಾರ ಬೆಳಗ್ಗೆಯಿಂದ ಸರಣಿ ಸಭೆ ನಡೆಸಲಿರುವ ಅಮಿತ್ ಶಾ, ಬಿಜೆಪಿ ಮುಖಂಡರೊಂದಿಗೆ ಚರ್ಚೆ ನಡೆಸಲಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯ, ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಸದಸ್ಯತ್ವ ಅಭಿಯಾನವನ್ನು ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಮಹತ್ವದ ಚರ್ಚೆಗಳು ನಡೆಯಲಿವೆ. ಜತೆಗೆ ರಾಜ್ಯ ಬಿಜೆಪಿಗೆ ಚುರುಕು ಮುಟ್ಟಿಸುವ ಕೆಲಸವನ್ನು ಅವರು ಮಾಡಲಿದ್ದಾರೆ.

ಕೋರ್ ಕಮಿಟಿ ಸಭೆಯ ಮೂಲಕ ಅಮಿತ್ ಶಾದಿನ ಆರಂಭಿಸಲಿದ್ದಾರೆ. ಬಳಿಕ ರಾಜ್ಯದ ಎಲ್ಲ ಸಂಸದರು, ಶಾಸಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ಭೋಜನದ ಬಳಿಕ ಜಿಲ್ಲಾ ಪದಾಧಿಕಾರಿಗಳೊಂದಿಗೆ ಸದಸ್ಯತ್ವ ಅಭಿಯಾನದ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸುವ ಉದ್ದೇಶದಿಂದ ಅಮಿತ್ ಶಾ ಅವರು ಪ್ರತಿಯೊಂದು ರಾಜ್ಯಕ್ಕೂ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಈಗಾಗಲೇ ದಕ್ಷಿಣ ಭಾರತದ ತಮಿಳುನಾಡು ಹಾಗೂ ಕೇರಳಕ್ಕೆ ಭೇಟಿ ನೀಡಿದ್ದಾರೆ. ದಕ್ಷಿಣ ಭಾರದಲ್ಲಿ ಅಸ್ತಿತ್ವ ಗಟ್ಟಿ ಮಾಡಿಕೊಳ್ಳಲು ಕರ್ನಾಟಕ ಮುಖ್ಯವಾದ್ದರಿಂದ 80 ಲಕ್ಷ ಸದಸ್ಯತ್ವ ನೋಂದಣಿಗೆ ನಿರ್ಧರಿಸಲಾಗಿದೆ.

ಪ್ರತಿಯೊಂದು ಜಿಲ್ಲೆಯಲ್ಲಿ ಅಭಿಯಾನ ಹೇಗೆ ನಡೆಯುತ್ತಿದೆ ಎನ್ನುವುದನ್ನು ಶಾ ಅವರು ಖುದ್ದಾಗಿ ಗಮನಿಸಲಿದ್ದಾರೆ. ಜಿಲ್ಲಾ ಪದಾಧಿಕಾರಿಗಳೊಂದಿಗೆ ಚರ್ಚಿಸುವುದರ ಜತೆಗೆ ಕೆಲ ಸಲಹೆಗಳನ್ನು ನೀಡಲಿದ್ದಾರೆ.

ವಿಶೇಷ ಭದ್ರತೆ

ಶುಕ್ರವಾರ ರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿರುವ ಅಮಿತ್ ಶಾ ಅವರನ್ನು ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವರಾದ ಅನಂತ್ ಕುಮಾರ್, ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಅವರು ಸ್ವಾಗತಿಸಿದ್ದಾರೆ. ಕುಮಾರಕೃಪಾ ಅತಿಥಿ ಗೃಹದಲ್ಲಿ ಶಾ ವಾಸವಾಗಿದ್ದು, ವಿಶೇಷ ಭದ್ರತೆ ನೀಡಲಾಗಿದೆ. ಕುಮಾರ ಕೃಪಾ ಹಾಗೂ ಬಿಜೆಪಿ ಕಚೇರಿ ಎದುರಿಗೆ ಶುಕ್ರವಾರ ಬೆಳಗ್ಗೆಯಿಂದಲೇ ಅರೆಸೇನಾ ಪಡೆ ನಿಯೋಜಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com