ಗಡಿಯಲ್ಲಿ ಮತ್ತೆ ಗುಂಡಿನ ದಾಳಿ; ಓರ್ವ ಮಹಿಳೆ ಸಾವು

ಪಾಪಿಸ್ತಾನ ಮತ್ತೆ ಗಡಿಯಲ್ಲಿ ಗುಂಡಿನ ದಾಳಿ ಮುಂದುವರೆಸಿದ್ದು, ಈ ಬಾರಿ ಸೈನಿಕರ ಬದಲಾಗಿ ಗಡಿಯಲ್ಲಿನ ನಾಗರೀಕರನ್ನು ಗುರಿಯಾಗಿಸಿಕೊಂಡಿದೆ.
ಗಡಿಯಲ್ಲಿ ಮತ್ತೆ ಗುಂಡಿನ ದಾಳಿ; ಓರ್ವ ಮಹಿಳೆ ಸಾವು

ಶ್ರೀನಗರ: ಪಾಪಿಸ್ತಾನ ಮತ್ತೆ ಗಡಿಯಲ್ಲಿ ಗುಂಡಿನ ದಾಳಿ ಮುಂದುವರೆಸಿದ್ದು, ಈ ಬಾರಿ ಸೈನಿಕರ ಬದಲಾಗಿ ಗಡಿಯಲ್ಲಿನ ನಾಗರೀಕರನ್ನು ಗುರಿಯಾಗಿಸಿಕೊಂಡಿದೆ.

ಇನ್ನು ಕಳೆದ ಶುಕ್ರವಾರ ತಡರಾತ್ರಿ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಮತ್ತು ಕತುವಾ ಸೆಕ್ಟರ್‌ನಲ್ಲಿ ನಡೆದಿದ್ದ ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 13 ಜನರ ಪೈಕಿ ಓರ್ವ ಮಹಿಳೆ ಇಂದು ಸಾವನ್ನಪ್ಪಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಶೆಲ್ ಮತ್ತು ಅತ್ಯಾಧುನಿಕ ಮಿಷನ್‌ಗಳನ್ನು ಬಳಕೆ ಮಾಡಿ ದಾಳಿ ನಡೆಸಲಾಗಿದ್ದು, ಗಡಿಯಂಚಿನ ಗ್ರಾಮಗಳಲ್ಲಿ ಸಾಕಷ್ಟು ಆಸ್ತಿ-ಪಾಸ್ತಿ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ.

ಹೊಸ ವರ್ಷದ ಆರಂಭದಲ್ಲಿಯೇ ಪಾಕಿಸ್ತಾನಿ ಪಡೆಗಳ ನಿರಂತರ ಗುಂಡಿನ ದಾಳಿಯಿಂದಾಗಿ ಗಡಿಯಲ್ಲಿ ಅಶಾಂತಿ ನೆಲೆಗೊಂಡಿದ್ದು, ಅಪಾಯಕಾರಿ ಪ್ರದೇಶಗಳಿಂದ ಗ್ರಾಮಸ್ಥರನ್ನು ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ. ಪಾಕಿಸ್ತಾನಿ ಪಡೆಗಳ ದಾಳಿಗೆ ಪ್ರತಿಯಾಗಿ ಬಿಎಸ್‌ಎಫ್ ಯೋಧರು ದಿಟ್ಟ ಉತ್ತರ ನೀಡಿದ್ದು, ಸತತ ಗುಂಡಿನ ದಾಳಿಯಲ್ಲಿ ಪಾಕಿಸ್ತಾನದ 5 ರೇಂಜರ್ಸ್‌ಗಳು ಹತರಾಗಿದ್ದರು.

ಇನ್ನು ದಾಳಿ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬಿಎಸ್‌ಎಫ್‌ನ ಇನ್ಸ್‌ಪೆಕ್ಟರ್ ಜನರಲ್ ರಾಕೇಶ್ ಶರ್ಮಾ ಅವರು, ಶುಕ್ರವಾರ ರಾತ್ರಿ ಸುಮಾರು 21.30ರಲ್ಲಿ ಪಾಕಿಸ್ತಾನಿ ಪಡೆಗಳು ದಿಢೀರನೆ ದಾಳಿ ಆರಂಭಿಸಿದವು. ಪದೇ-ಪದೇ ಗುಂಡಿನ ದಾಳಿ ಮತ್ತು ಶೆಲ್ ದಾಳಿ ನಡೆಯುತ್ತಿತ್ತು. ಹೀಗಾಗಿ ನಾವು ಪ್ರತಿ ದಾಳಿ ನಡೆಸಬೇಕಾಯಿತು. ಉಭಯ ಪಡೆಗಳಿಂದ ಸುಮಾರು ರಾತ್ರಿ 3 ಗಂಟೆಯವರೆಗೂ ದಾಳಿ ನಡೆದಿತ್ತು. ಆದರೆ ಬೆಳಗ್ಗೆ 7 ಗಂಟೆಗೆ ಮತ್ತೆ ದಾಳಿ ಆರಂಭಿಸಿದ ಪಾಕಿಸ್ತಾನಿ ಪಡೆಗಳು ಗಡಿಯಲ್ಲಿನ ಗ್ರಾಮಗಳ ನಾಗರೀಕರನ್ನು ಗುರಿಯಾಗಿಸಿಕೊಂಡು ಶೆಲ್ ದಾಳಿ ನಡೆಸಿದ್ದಾರೆ ಎಂದು ಹೇಳಿದರು.

ಸೇನಾ ಮೂಲಗಳ ಪ್ರಕಾರ ಗಡಿಯಲ್ಲಿನ ಮನ್ಯಾರಿ, ಪಾನ್ಸರ್, ಬೊಬಿಯಾ, ಲೊಂಡಿ, ಚೈಲರಿ, ಚಚ್ವಲ್, ಮಂಗುಚಕ್, ರಿಗಾಲ್, ಮವಾ, ಸಾದೋ, ಸಾಂಬಾ ಮತ್ತು ಕತುವಾ ದಲ್ಲಿರುವ ಚಕ್ ಫಕಿರಾ ಗ್ರಾಮಗಳ ಮೇಲೆ ಪಾಕಿಸ್ತಾನಿ ಯೋಧರು ದಾಳಿ ನಡೆಸಿದ್ದಾರೆ. ಸಾಂಬಾದಲ್ಲಿರುವ ಬೈಂಗಲ್ಲರ್ ಸೆಕ್ಟರ್‌ನಲ್ಲಿ ಇಬ್ಬರು ನಾಗರೀಕರು ಗಾಯಗೊಂಡಿದ್ದು, ಸೇನಾ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com