ಪಾಕ್ ಗಡಿಯಲ್ಲಿ ಮತ್ತೆ ಯುದ್ಧ ಭೀತಿ

ದೇಶದಲ್ಲಿ ಜ.26ರ ಗಣರಾಜ್ಯೋತ್ಸವ ಸಂಭ್ರಮವನ್ನು ಹೇಗಾದರೂ ಮಾಡಿ ಹಾಳುಗೆಡವಲು...
ಪಾಕ್ ಗಡಿಯಲ್ಲಿ ಮತ್ತೆ ಯುದ್ಧ ಭೀತಿ

ಜಮ್ಮು: ದೇಶದಲ್ಲಿ ಜ.26ರ ಗಣರಾಜ್ಯೋತ್ಸವ ಸಂಭ್ರಮವನ್ನು ಹೇಗಾದರೂ ಮಾಡಿ ಹಾಳುಗೆಡವಲು ಪಣತೊಟ್ಟಿರುವ ಪಾಕ್ ಸೇನೆ ಕಾಶ್ಮೀರ ಕಣಿವೆಯಲ್ಲಿ ಅಪ್ರಚೋದಿತ ಗುಂಡಿನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಪಾಕ್ ಸೇನೆ ಶುಕ್ರವಾರ ರಾತ್ರಿಯಿಂದೀಚೆಗೆ ನಡೆಸುತ್ತಿರುವ ಈ ದಾಳಿಗೆ ಇಬ್ಬರು ಬಿಎಸ್‌ಎಫ್ ಯೋಧರು ಹಾಗೂ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಕಥುವಾ ಮತ್ತು ಸಾಂಬಾ ಜಿಲ್ಲೆಯ 13 ಬಿಎಸ್‌ಎಫ್ ಔಟ್‌ಪೋಸ್ಟ್ ಹಾಗೂ ಗ್ರಾಮಗಳನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆಯುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನಾಲ್ಕು ಗಡಿ ಗ್ರಾಮಗಳ ಒಂದು ಸಾವಿರಕ್ಕೂ ಹೆಚ್ಚು ಗ್ರಾಮಸ್ಥರನ್ನು ಸ್ಥಳಾಂತರಿಸಲಾಗಿದೆ.

ಸೇನೆಯ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದಾರೆ.

ಡಿ.31ರಂದು ರಾತ್ರಿ ಅರಬ್ಬೀ ಸಮುದ್ರದ ಮೂಲಕ ಮತ್ತು ಕಾಶ್ಮೀರ ಗಡಿ ಮೂಲಕ ಉಗ್ರರನ್ನು ಭಾರತಕ್ಕೆ ಕಳುಹಿಸಲು ಪಾಕ್ ಸೇನೆ ಪ್ರಯತ್ನಿಸಿತ್ತು. ಆದರೆ, ಕೋಸ್ಟ್‌ಗಾರ್ಡ್ ಹಾಗೂ ಬಿಎಸ್‌ಎಫ್ ಯೋಧರಿಂದಾಗಿ ಈ ಎರಡೂ ಪ್ರಯತ್ನಗಳು ವಿಫಲವಾಗಿದ್ದವು. ಹಾಗಾಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸಿದ್ಧವಾಗಿ ನಿಂತಿರುವ 50ರಿಂದ 60 ಉಗ್ರರಿಗೆ ಗಡಿದಾಟಲು ಮತ್ತೊಂದು ಅವಕಾಶ ಮಾಡಿಕೊಡಲೆಂದೇ ಮತ್ತೆ ಗಡಿಯಲ್ಲಿ ಗುಂಡಿನ ಮೊರೆತ ಆರಂಭಿಸಿದೆ ಪಾಕ್.

ಶುಕ್ರವಾರ ಬಿಎಸ್‌ಎಫ್ ಯೋಧರು ತಕ್ಕ ಉತ್ತರ ನೀಡಿದ ಹಿನ್ನೆಲೆಯಲ್ಲಿ ಶನಿವಾರ ಮುಂಜಾನೆ 3 ಗಂಟೆ ವೇಳೆ ಗಡಿಯಾಚೆಯಿಂದ ಗುಂಡಿನ ದಾಳಿ ನಿಂತಿತ್ತು. ಇದಾದ ನಾಲ್ಕು ಗಂಟೆ ಬಳಿಕ ಅಂದರೆ ಬೆಳಗ್ಗೆ 7 ಗಂಟೆಗೆ ಮತ್ತೆ ಗುಂಡಿನ ಮೊರೆತ ಆರಂಭವಾಗಿದೆ.

ಒಬಾಮ ಭೇಟಿ ವೇಳೆ ಆತಂಕ ಸೃಷ್ಟಿ!
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಗಡಿಯಲ್ಲಿ ಆತಂಕ ಸೃಷ್ಟಿಸುವ ಮೂಲಕ ಒಬಾಮ ಭಾರತ ಭೇಟಿಯನ್ನು ರದ್ದು ಮಾಡುವುದು ಅಥವಾ ವಿಧ್ವಂಸಕ ಕೃತ್ಯ ಎಶಗುವುದೇ ಪಾಕಿಸ್ತಾನ ಗುರಿ ಎಂದು ಮೇಜರ್ ಜನರಲ್ ಎಸ್.ಆರ್. ಸಿನ್ಹೋ ಆರೋಪಿಸಿದ್ದಾರೆ.

ಪಲಾಯನ ಮಾಡಿದ ಉಗ್ರರು
ಪಾಕ್‌ನ ಶೆಲ್ ದಾಳಿಯ ನೆರವು ಪಡೆದುಕೊಂಡು ಶುಕ್ರವಾರ ರಾತ್ರಿ 11.30ರ ವೇಳೆಗೆ ಸಾಂಬಾ ಸೆಕ್ಟರ್‌ನ ಛೋರ್ ಗಾಲಿಯಲ್ಲಿ ಏಳರಿಂದ ಎಂಟು ಉಗ್ರರ ಗುಂಪು ಕಾಶ್ಮೀರ ಗಡಿಯೊಳಗೆ ನುಸುಳಲು ಯತ್ನಿಸಿತ್ತು. ಬಿಎಸ್‌ಎಫ್ ಯೋಧರು ತಕ್ಷಣ ಉಗ್ರರತ್ತ ದಾಳಿ ನಡೆಸಿದ್ದು ಉಗ್ರರು ಸ್ಥಳದಿಂದ ಪಲಾಯನ ಮಾಡಿದ್ದಾರೆ.

ಭಾರತಕ್ಕೇ ಧಮಕೀ
ಉಗ್ರರರನ್ನು ಗಡಿದಾಟಿಸಲು ಪದೇ ಪದೆ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನ ಈಗ ಭಾರತಕ್ಕೆ ಆವಾಜ್ ಹಾಕಿದೆ. ಭಾರತವೇ ಕದನ ವಿರಾಮ ಉಲ್ಲಂಘಿಸಿ ನಮ್ಮ ಐವರು ಸೈನಿಕರನ್ನು ಹತ್ಯೆ ಮಾಡಿದೆ ಎಂದು ಆರೋಪಿಸಿದೆ. ಜತೆಗೆ, ಇನ್ನು ಮುಂದೆ ಭಾರತಕ್ಕೆ ಅರ್ಥವಾಗುವ ಭಾಷೆಯಲ್ಲೇ ನಾವು ಸಂವಹನ ನಡೆಸುತ್ತೇವೆ ಎನ್ನುವ ಧಮಕಿಯನ್ನೂ ಹಾಕಿದೆ ಪಾಕ್.

ಕಳೆದ ಆರೇಳು ತಿಂಗಳಿಂದ ಭಾರತದ ಜತೆಗೆ ಸಂಬಂಧ ಸುಧಾರಿಸಲು, ಶಾಂತಿ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಆದರೆ, ಅವರಿಗೆ ಶಾಂತಿಯ ಭಾಷೆ ಅರ್ಥವಾಗುತ್ತಿಲ್ಲ. ಇನ್ನು ಮುಂದೆ ಭಾರತದ ಜತೆಗೆ ಅವರಿಗೆ ಅರ್ಥವಾಗುವ ಭಾಷೆಯಲ್ಲೇ ನಾವು ಸಂವಹನ ನಡೆಸಲಿದ್ದೇವೆ ಎಂದು ಪಾಕ್‌ನ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com