
ನೀತಿ ಆಯೋಗಕ್ಕೆ ಅರವಿಂದ್ ಪನಾಗರಿಯಾ ಉಪಾಧ್ಯಕ್ಷ
6 ಸದಸ್ಯರು, ಮೂವರು ಆಹ್ವಾನಿತರ ಹೆಸರು ಘೋಷಣೆ
ಹೊಸ ಆಯೋಗಕ್ಕೆ ಪ್ರಧಾನಿ ಮೋದಿಯೇ ಮುಖ್ಯಸ್ಥ
ನವದೆಹಲಿ: 65 ವರ್ಷಗಳಷ್ಟು ಹಳೆಯ ಯೋಜನಾ ಆಯೋಗದ ಜಾಗವನ್ನು ನೀತಿ ಆಯೋಗ ಆಕ್ರಮಿಸಿಕೊಂಡಿದೆ. ಬದಲಾಗುತ್ತಿರುವ ಭಾರತದ ರಾಷ್ಟ್ರೀಯ ಸಂಸ್ಥೆಯಾಗಿ ರೂಪುಗೊಂಡಿರುವ ನೀತಿ ಆಯೋಗಕ್ಕೆ ಮುಕ್ತ ಮಾರುಕಟ್ಟೆ ಅರ್ಥಶಾಸ್ತ್ರಜ್ಞ ಅರವಿಂದ್ ಪನಗರಿಯಾ ಅವರು ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ನೀತಿ ಆಯೋಗದ ಮುಖ್ಯಸ್ಥರಾಗಿರಲಿದ್ದಾರೆ. ಸೋಮವಾರ ನೀತಿ ಆಯೋಗದ ಉಪಾಧ್ಯಕ್ಷ, 6 ಮಂದಿ ಸದಸ್ಯರು ಮತ್ತು ಮೂವರು ವಿಶೇಷ ಆಹ್ವಾನಿತರ ಹೆಸರುಗಳನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ.
ಯಾರೀ ಪನಗರಿಯಾ?
62 ವರ್ಷದ ಅರವಿಂದ ಪನಗರಿಯಾ ಅವರು ಭಾರತೀಯ ಅಮೆರಿಕನ್ ಅರ್ಥಶಾಸ್ತ್ರಜ್ಞ. ಇವರು ಅಮೆರಿಕದ ಕೊಲಂಬಿಯಾ ವಿವಿಯ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ನೀತಿ ಆಯೋಗದ ಮೊದಲ ಉಪಾಧ್ಯಕ್ಷ ಎಂಬ ಹೆಗ್ಗಳಿಕೆಗೆ ಪನಗರಿಯಾ ಪಾತ್ರರಾಗಿದ್ದಾರೆ. ಇವರು ಮೊದಲು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನ ಮುಖ್ಯ ಆರ್ಥಿಕ ತಜ್ಞರಾಗಿಯೂ, ಮೇರಿಲ್ಯಾಂಡ್ ವಿವಿಯ ಅಂತಾರಾಷ್ಟ್ರೀಯ ಅರ್ಥಶಾಸ್ತ್ರ ಕೇಂದ್ರದ ಸಹ ನಿರ್ದೇಶಕ ಹಾಗೂ ಅರ್ಥಶಾಸ್ತ್ರ ಉುಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಪ್ರಿನ್ಸ್‌ಟನ್ ವಿವಿಯಲ್ಲಿ ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಪನಗರಿಯಾ ವಿಶ್ವಬ್ಯಾಂಕ್, ಅಂತಾರಾಷ್ಟ್ರೀಯ ಹಣಕಾಸು ನಿಧಿ, ವಿಶ್ವ ವ್ಯಾಪಾರ ಸಂಸ್ಥೆ ಮತ್ತು ವಿಶ್ವಸಂಸ್ಥೆಯ ವ್ಯಾಪಾರ ಹಾಗೂ ಅಭಿವೃದ್ಧಿ ಸಮಾವೇಶದಲ್ಲೂ ಕಾರ್ಯ ನಿರ್ವಹಿಸಿದ್ದಾರೆ.
ಸದ್ಯದಲ್ಲೇ ಹೊಸ ವೆಬ್
ನೀತಿ (ನ್ಯಾಷನಲ್ ಇನ್‌ಸ್ಟಿಟೂಷನ್ ಫಾರ್ ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ) ಆಯೋಗದ ಹೊಸ ವೆಬ್ ಸೈಟ್‌ಗೆ ಕೆಲವೇ ದಿನಗಳಲ್ಲಿ ಚಾಲನೆ ಸಿಗಲಿದೆ. ಆಡಳಿತಾತ್ಮಕ ಸುಧಾರಣೆ ಪ್ರಕ್ರಿಯೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ನೀತಿ ಆಯೋಗದ ವೆಬ್‌ಸೈಟ್ ಸಿದ್ಧವಾಗಲಿದೆ ಎಂದು ಟ್ವಿಟರ್‌ನಲ್ಲಿ ತಿಳಿಸಲಾಗಿದೆ. ಈಗ ನೀವು ಯೋಜನಾ ಆಯೋಗದ ವೆಬ್‌ಸೈಟ್ ಅನ್ನು ತೆರೆದು ನೋಡಿದರೆ ಅಲ್ಲಿ ಈ ಯೋಜನೆ ಬದಲಿಗೆ ನೀತಿ ಆಯೋಗ ಬಂದಿರುವ ಬಗ್ಗೆ ಮಾಹಿತಿ ನೀಡಲಾಗಿದೆ, ಜತಗೆ ಈ ಬಗೆಗಿನ ಪತ್ರಿಕಾ ಪ್ರಕಟಣೆಯನ್ನೂ ಅಪ್‌ಲೋಡ್ ಮಾಡಲಾಗಿದೆ.
ಹೀಗಿದೆ ನೀತಿ ಆಯೋಗದ ಟೀಂ
ಅಧ್ಯಕ್ಷ-ನರೇಂದ್ರ ಮೋದಿ, ಪ್ರಧಾನ ಮಂತ್ರಿ
ಉಪಾಧ್ಯಕ್ಷ-ಅರವಿಂದ್ ಪನಗರಿಯಾ, ಅರ್ಥಶಾಶ್ತ್ರಜ್ಞ
ಪೂರ್ಣಕಾಲಿಕ ಸದಸ್ಯರು
ವಿವೇಕ್ ಡೆಬ್ರಾಯ್, ಅರ್ಥಶಾಸ್ತ್ರಜ್ಞ
ಡಾ.ವಿಕೆ ಸಾರಸ್ವತ್, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಮಾಜಿ ಕಾರ್ಯದರ್ಶಿ
ಪದನಿಮಿತ್ತ ಸದಸ್ಯರು
ರಾಜನಾಥ್ ಸಿಂಗ್, ಕೇಂದ್ರ ಸಚಿವ
ಅರುಣ್ ಜೇಟ್ಲಿ, ಕೇಂದ್ರ ಸಚಿವ
ಅರುಣ್ ಜೇಟ್ಲಿ, ಕೇಂದ್ರ ಸಚಿವ
ರಾಧಾ ಮೋಹನ್ ಸಿಂಗ್, ಕೇಂದ್ರ ಸಚಿವ
ವಿಶೇಷ ಆಹ್ವಾನಿತರು
ನಿತಿನ್ ಗಡ್ಕರಿ, ಕೇಂದ್ರ ಸಚಿವ
ತಾವರ್ ಚಂದ್ ಗೆಹ್ಲೂಟ್, ಕೇಂದ್ರ ಸಚಿವ
ಸ್ಮೃತಿ ಇರಾನಿ, ಕೇಂದ್ರ ಸಚಿವೆ
Advertisement