
ನರಸಿಂಗಪುರ: ಪಿಕೆ ಚಿತ್ರ ಬಿಡುಗಡೆಗೂ ಮುನ್ನ ಕೆಲವು ದೃಶ್ಯಗಳನ್ನು ತೆಗೆದು ಹಾಕುವಂತೆ ನಿರ್ದೇಶಕರಿಗೆ ತಿಳಿಸಲಾಗಿತ್ತು ಎಂದು ಸೆನ್ಸಾರ್ ಮಂಡಳಿ ಮಂಗಳವಾರ ಹೇಳಿದೆ.
ಪಿಕೆ ಚಿತ್ರದಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಲಾಗಿದ್ದು ಚಿತ್ರದ ಪ್ರದರ್ಶನಕ್ಕೆ ಹಲವು ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿತ್ತು. ಹಿಂದೂ ಧರ್ಮ ಹಾಗೂ ನಂಬಿಕೆಗಳ ಬಗ್ಗೆ ಅವಹೇಳನಕಾರಿ, ಪ್ರಚೋದನೆ ನೀಡುವಂತಹ ಹೇಳಿಕೆಗಳನ್ನೊಳಗೊಂಡಿರುವ ಪಿಕೆ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಪ್ರಮಾಣಪತ್ರವನ್ನು ಹೇಗೆ ನೀಡಿತ್ತು ಎಂಬುದಕ್ಕೆ ಸಿಬಿಐ ತನಿಖೆಯಾಗಬೇಕು ಎಂದು ಜ್ಯೋತೇಶ್ವರ ಮಂದಿರದ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಆಗ್ರಹಿಸಿದ್ದರು.
ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಸೆನ್ಲಾರ್ ಮಂಡಳಿ ಸದಸ್ಯ ಸತೀಶ್ ಕಲ್ಯಾಣ್‌ಕರ್ ಅವರು, ಸಿನಿಮಾ ಪರಿಶೀಲನೆ ವೇಳೆ ಕೆಲವು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವಂತಹ ದೃಶ್ಯಗಳಿದ್ದು, ಇಂತಹ ದೃಶ್ಯಗಳಿಂದ ಧರ್ಮಗಳ ಮೇಲೆ ನಂಬಿಕೆ ಇಟ್ಟಿರುವ ಜನರಿಗೆ ನೋವುಂಟಾಗುತ್ತದೆ ಎಂದು ತಿಳಿಸಿ, ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ ತಿಳಿಸಲಾಗಿತ್ತು. ಆದರೆ ನಮ್ಮ ಮಾತನ್ನು ಚಿತ್ರದ ತಂಡ ತಿರಸ್ಕರಿಸಿ ಆ ದೃಶ್ಯಗಳಿಗೆ ಕತ್ತರಿ ಹಾಕದೆಯೇ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
Advertisement