ಈಗಲಾದರೂ ತರೂರ್ ಸತ್ಯ ಹೇಳಬೇಕು: ಸ್ವಾಮಿ

ಸುನಂದಾ ಪುಷ್ಕರ್ ಅವರ ಸಾವಿನ ವಿಚಾರಕ್ಕೆ ಸಂಬಂಧಿಸಿದಂತೆ ಪತಿ ಶಶಿತರೂರ್ ಅವರು ಈಗಲಾದರೂ ಸತ್ಯ ಹೇಳಬೇಕು ಎಂದು ಡಾ. ಸ್ವಾಮಿ ಆಗ್ರಹಿಸಿದ್ದಾರೆ.
ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ (ಸಂಗ್ರಹ ಚಿತ್ರ)
ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ (ಸಂಗ್ರಹ ಚಿತ್ರ)

ನವದೆಹಲಿ: ಸುನಂದಾ ಪುಷ್ಕರ್ ಅವರ ಸಾವಿನ ವಿಚಾರಕ್ಕೆ ಸಂಬಂಧಿಸಿದಂತೆ ಪತಿ ಶಶಿತರೂರ್ ಅವರು ಈಗಲಾದರೂ ಸತ್ಯ ಹೇಳಬೇಕು ಎಂದು ಬಿಜೆಪಿ ಮುಖಂಡ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಆಗ್ರಹಿಸಿದ್ದಾರೆ.

ಸುನಂದಾ ಪುಷ್ಕರ್ ಅವರ ಸಾವು ಸಹಜ ಸಾವಲ್ಲ. ಅದು ಕೊಲೆ ಎಂಬ ರೀತಿಯಲ್ಲಿ ದೆಹಲಿ ಏಮ್ಸ್ ಆಸ್ಪತ್ರೆಯ ವೈದ್ಯರು ವರದಿ ನೀಡಿದ ಬೆನ್ನಲ್ಲೇ, ದೆಹಲಿ ಪೊಲೀಸರು ಅನಾಮಿಕರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ್ದಾರೆ. ಈ ಹಿನ್ನಲೆಯಲ್ಲಿ ಮಾತನಾಡಿದ ಸುಬ್ರಮಣಿಯನ್ ಸ್ವಾಮಿ ಅವರು, 'ಪ್ರಕರಣದ ವಿಚಾರಣೆಯ ಪ್ರಕ್ರಿಯೆ ಆರಂಭವಾಗಿರುವುದಕ್ಕೆ ನನಗೆ ಸಂತಸವಾಗಿದೆ. ಇದೇ ಜನವರಿ 15ರಂದು ನಾನು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುತ್ತೇನೆ. ಸತ್ಯಾಂಶ ಈಗಾಗಲೇ ಬಹಿರಂಗವಾಗಿರುವುದರಿಂದ ಸುನಂದಾ ಪತಿ ಶಶಿ ತರೂರ್ ಅವರು ಈಗಲಾದರೂ ಸತ್ಯಾಂಶ ಏನು ಎಂದು ಹೇಳಬೇಕು' ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದರು.

'ಇನ್ನು ಈ ಪ್ರಕರಣದಲ್ಲಿ ನಿಜಕ್ಕೂ ಅಭಿನಂದನೆಗೆ ಅರ್ಹರಾದವರು ದೆಹಲಿ ಏಮ್ಸ್ ಆಸ್ಪತ್ರೆಯ ವೈದ್ಯರು. ಈ ಹಿಂದಿನ ಸರ್ಕಾರದ ಒತ್ತಡದ ಹೊರತಾಗಿಯಾ ತಮ್ಮ ವಸ್ತುನಿಷ್ಟ ವರದಿ ನೀಡಿದ್ದಾರೆ' ಎಂದು ಸ್ವಾಮಿ ಹೇಳಿದ್ದಾರೆ.

ಅಂತೆಯೇ ಪ್ರಕರಣ ಸಂಬಂಧ ಡಾ.ಸುಧೀರ್ ಗುಪ್ತಾ ಅವರ ಕಾರ್ಯವನ್ನು ಶ್ಲಾಘಿಸಿರುವ ಸ್ವಾಮಿ, 'ವಿಧಿವಿಜ್ಞಾನ ಪ್ರಯೋಗಾಲಯದ ಮುಖ್ಯಸ್ಥರಾಗಿರುವ ಡಾ.ಸುಧೀರ್ ಗುಪ್ತಾ ಅವರು ಈ ಪ್ರಕರಣದಲ್ಲಿ ತುಂಬ ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಪ್ತಾ ಅವರನ್ನು ವರ್ಗಾವಣೆ ಮಾಡುವ ಸಾಕಷ್ಟು ಪ್ರಯತ್ನಗಳಾದವು. ಆದರೂ ಅವರು ತಮ್ಮ ವಸ್ತು ನಿಷ್ಟ ವರದಿ ನೀಡಿದ್ದಾರೆ. ಶಶಿ ತರೂರ್ ಅವರು ಮಾತನಾಡಿದಷ್ಟು ಸ್ಪಷ್ಟವಾಗಿ ಅವರಿಗೆ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ. ಆದರೆ ಸುಧೀರ್ ಗುಪ್ತಾ ಅವರು ಬುದ್ಧಿಜೀವಿಯಾಗಿದ್ದು, ಸಾಕಷ್ಟು ಓದಿಕೊಂಡಿದ್ದಾರೆ. ಅವರಿಗೆ ಅದ್ಭುತ ಸ್ಮರಣ ಸಮಾರ್ಥ್ಯವಿದೆ' ಎಂದು ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಕಳೆದ 2014 ಜನವರಿ 17ರಂದು ದೆಹಲಿಯ ಖಾಸಗಿ ಹೋಟೆಲ್‌ನಲ್ಲಿ ಸುನಂದಾ ಪುಷ್ಕರ್ ಅವರು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಲೋಕಸಭೆ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಕಲಾಪದಲ್ಲಿ ಪಾಲ್ಗೊಂಡಿದ್ದ ಪತಿ ಶಶಿತರೂರ್ ಅವರೊಂದಿಗೆ ಸುನಂದಾ ಪುಷ್ಕರ್ ಅವರು ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದರು. ಆದರೆ ಜನವರಿ 17ರ ರಾತ್ರಿ ವೇಳೆಗೆ ಸುನಂದಾ ಪುಷ್ಕರ್ ಅವರ ಮೃತದೇಹ ಅವರ ಕೊಠಡಿಯಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com