
ಬೆಂಗಳೂರು: ವೈಯ್ಯಾಲಿಕಾವಲ್ ಬಳಿ ಜೆಡಿಎಸ್ ಕಚೇರಿಗೆ ಬಿಬಿಎಂಪಿ ನೀಡಿದ ಜಾಗದಲ್ಲಿ ಯಾವುದೇ ರೀತಿಯ ಕಾಮಗಾರಿ ನಡೆಸದೆ ಯಥಾಸ್ಥಿತಿ ಕಾಯ್ದುಕೊಳ್ಳವಂತೆ ಹೈ ಕೋರ್ಟ್ ನಿರ್ದೇಶಿಸಿದೆ.
ಜೆಡಿಎಸ್ ಸ್ವಂತ ಕಟ್ಟಡ ನಿರ್ಮಿಸಲು ಚೌಡಯ್ಯ ಸ್ಮಾರಕ ಸಭಾಂಗಣದ ಹಿಂಭಾಗ 1.1 ಎಕರೆ ಜಮೀನು ಮಂಜೂರು ಮಾಡಿ ಡಿ.31ರಂದು ನಡೆದ ಬಿಬಿಎಪಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.
ಬಿಬಿಎಂಪಿ ನೀಡಿರುವ ಜಾಗ ತಮ್ಮ ಕುಟುಂಬಕ್ಕೆ ಸೇರಿದ್ದಾಗಿ ಚಂದ್ರಶೇಖರ್ ಭಟ್ ಎಂಬುವರು ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾ.ಬಿ.ಎ.ನಾಗರತ್ನ ಅವರ ಪೀಠ, ಮಧ್ಯಂತರ ಆದೇಶದಲ್ಲಿ ಜೆಡಿಎಸ್ ಕಚೇರಿ ನಿರ್ಮಾಣಕ್ಕೆ ಜ.20ರವರೆಗೂ ತಡೆಯಾಜ್ಞೆ ನೀಡಿದೆ. ಅಲ್ಲದೆ, ಬಿಬಿಎಪಿ ಹಾಗೂ ಜೆಡಿಎಸ್‌ಗೆ ನೋಟಿಸ್ ಜಾರಿ ಮಾಡಿ, ಮುಂದಿನ ಆದೇಶದವರೆಗೂ ಈ ಜಮೀನಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿದೆ.
ವಿವಾದವೇನು?
ಜೆಡಿಎಸ್ ಕಚೇರಿ ನಿರ್ಮಾಣಕ್ಕೆ ವಾಷಿಕ 100ರಂತೆ ಮೂವತ್ತು ವರ್ಷಕ್ಕೆ ಗುತ್ತಿಗೆ ನೀಡಲು ಪಾಲಿಕೆ ತನ್ನ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡಿತ್ತು. ಆದರೆ ಈ ಜಾಗವೂ ಸೇರಿ 3.3 ಎಕರೆ ಜಾಗವನ್ನು 1954ರಲ್ಲಿ ರಾಜ ಮನೆತನದವರು ತಮ್ಮ ತಾಯಿ ಸುಬ್ಬಲಕ್ಷ್ಮಿಗೆ ನೀಡಿದ್ದಾಗಿ ಚಂದ್ರಶೇಖರ್ ಭಟ್ ಅರ್ಜಿಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಈ ಜಾಗಕ್ಕೆ ಸಂಬಂಧಿಸಿದಂತೆ ಈ ವರೆಗೂ ಪಾಲಿಕೆ ಖಾತೆ ಮಾಡಿಸಿಕೊಡುವಂತೆ ಹೈಕೋರ್ಟ್‌ನಲ್ಲಿ ಈ ಮುಂಚೆಯೇ ಅರ್ಜಿ ದಾಖಲಿಸಲಾಗಿದೆ.
ಈ ಅರ್ಜಿ ಇನ್ನೂ ವಿಚಾರಣೆಯ ಹಂತದಲ್ಲಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಹ ಈ ಜಾಗ ಖಾಸಗಿಯವರಿಗೆ ಸೇರಿರುವುದಾಗಿ ಬಿಬಿಎಂಪಿಗೆ ವರದಿ ನೀಡಿದೆ. ಹೀಗಿದ್ದರೂ ಪಾಲಿಕೆ ತನಗೆ ಸೇರದ ಖಾಸಗಿ ಸ್ವತ್ತನ್ನು ಜೆಡಿಎಸ್ ಕಚೇರಿಗೆ ನೀಡಲು ತೀರ್ಮಾನಿಸಿದ್ದು, ಇದನ್ನು ರದ್ದು ಪಡಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿದ್ದರು. ವಿಚಾರಣೆ ನಡೆಸಿದ ಏಕಸದಸ್ಯ ಪೀಠ, ಪಾಲಿಕೆ ನಿರ್ಣಯಕ್ಕೆ ತಡೆಯಾಜ್ಞೆ ನೀಡಿ ವಿಚಾರಣೆ ಮುಂದೂಡಿದೆ.
Advertisement