ಅಪಘಾತ ಸಂಖ್ಯೆ ಗಣನೀಯ ಇಳಿಕೆ

ಸಂಚಾರ ನಿಯಮಗಳ ಪರಿಣಾಮಕಾರಿ...
ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಬಿ.ದಯಾನಂದ್
ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಬಿ.ದಯಾನಂದ್
Updated on

ಬೆಂಗಳೂರು: ಸಂಚಾರ ನಿಯಮಗಳ ಪರಿಣಾಮಕಾರಿ ಅನುಷ್ಠಾನದಿಂದಾಗಿ 2014ರಲ್ಲಿ ವಾಹನ ಅಪಘಾತದ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಸಂಚಾರ ನಿಯಮ ಉಲ್ಲಂಘನೆ ಸಂಬಂಧ 74 ಲಕ್ಷ ಕೇಸ್ ದಾಖಲಾಗಿ, 65 ಕೋಟಿ ರುಪಾಯಿ ದಂಡ ವಸೂಲಿಯಾಗಿದೆ.

ಸಂಚಾರ ಪೊಲೀಸರು ಕಳೆದ ಹತ್ತು ವರ್ಷಗಳಲ್ಲಿ ಸಂಭವಿಸಿದ ಅಪಘಾತ, ಸಾವುನೋವುಗಳ ಅಂಕಿ ಅಂಶ ಬಿಡುಗಡೆ ಮಾಡಿದ್ದಾರೆ. ಆ ಪ್ರಕಾರ 2013ರಲ್ಲಿ 5230 ಅಪಘಾತಗಳು ಸಂಭವಿಸಿದ್ದು, 771 ಮಂದಿ ಮೃತಪಟ್ಟು, 4289 ಜನ ಗಾಯಗೊಂಡಿದ್ದರು. 2014ರಲ್ಲಿ 5004 ಅಪಘಾತ ಸಂಭವಿಸಿದ್ದು, 729 ಜನ ಮೃತಪಟ್ಟು, 4098 ಮಂದಿ ಗಾಯಗೊಂಡಿದ್ದಾರೆ. ಈ ಹತ್ತು ವರ್ಷಗಳ ಅಂಕಿಅಂಶ ಪರಿಶೀಲಿಸಿದರೆ 2014ರಲ್ಲಿ ಅಪಘಾತ, ಸಾವು ಇಳಿಮುಖವಾಗಿರುವುದು ಪೊಲೀಸರಲ್ಲಿ ಕೊಂಚ ನೆಮ್ಮದಿ ತಂದಿದ್ದು, ಪ್ರಸಕ್ತ ವರ್ಷದಲ್ಲಿ ಈ ಸಂಖ್ಯೆಯನನು ಮತ್ತಷ್ಟು ತಗ್ಗಿಸಲು ಸಜ್ಜಾಗಿದ್ದಾರೆ.

ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಬಿ.ದಯಾನಂದ್ ಸುದ್ದಿಗಾರರೊಂದಿಗೆ ಮಾತನಾಡಿ, ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಗರದಲ್ಲಿ ಹೆಚ್ಚು ವಾಹನಗಳಿದ್ದು, ದೆಹಲಿಯಲ್ಲಿ ನಾಲ್ವರಿಗೆ ಒಂದು ವಾಹನವಿದ್ದರೆ ನಗರದಲ್ಲಿ ಇಬ್ಬರಿಗೆ ಒಂದರಂತೆ ವಾಹನಗಳಿವೆ.

ಇದರಿಂದ ಸಂಚಾರ ದಟ್ಟಣೆ ಹಾಗೂ ಅಪಘಾತಗಳು ಸಂಭವಿಸಿವುದು ಸಹಜ ಎಂದರು. ಟ್ರಾಫಿಕ್ ನಿಯಂತ್ರಣ ಮತ್ತು ಅಪಘಾತಗಳ ತಡೆಗಚ್ಚುವಿಕೆಗಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಮಾಡಿ, ಸಂಚಾರ ಕಾನೂನು ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

ಜತೆಗೆ ನಗರದಲ್ಲಿ ಅತಿ ಹೆಚ್ಚು ಅಪಘಾತ ಸಂಭವಿಸುವ 10 ರಸ್ತೆಗಳನ್ನು ಬ್ಲಾಕ್‌ಸ್ಪಾಟ್ ರಸ್ತೆಗಳೆಂದು ಗುರುತಿಸಿ ಅರಿವು ಮೂಡಿಸಿದ್ದರಿಂದ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಅಭಿಪ್ರಾಯಪಟ್ಟರು. ನಗರದಲ್ಲಿ ಸಂಭವಿಸುವ ಅಪಘಾತಗಳಲ್ಲಿ ಬೈಕ್‌ಗಳದ್ದೇ ಜಾಸ್ತಿ. ನಗರದಲ್ಲಿರುವಂತೆ ಹೆಲ್ಮೆಟ್ ಕಡ್ಡಾಯ ನಿಯಮವನ್ನು ರಾಜ್ಯಾದ್ಯಂತ ವಿಸ್ತರಿಸುವ ಚಿಂತನೆ ನಡೆದಿದೆ. ಜತೆಗೆ ನಗರದಲ್ಲಿ ಹಿಂಬದಿ ಸವಾರ ಕೂಡ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ನಿಯಮ ಜಾರಿಗೊಳಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದರು.

  • 74 ಲಕ್ಷ ಕೇಸು ದಾಖಲು, 65 ಕೋಟಿ ರುಪಾಯಿ ದಂಡ ವಸೂಲಿ
  • ಹತ್ತು ವರ್ಷಗಳಲ್ಲಿ ಸಂಭವಿಸಿದ ಅಪಘಾತ, ಸಾವುನೋವು ಅಂಕಿಅಂಶ ಬಿಡುಗಡೆ.
ನಿಯಮ ಉಲ್ಲಂಘನೆ ಮತ್ತು ಪ್ರಕರಣ
  • ಮದ್ಯಪಾನ ಮಾಡಿ ವಾಹನ ಚಾಲನೆ-55,138
  • ಅತಿವೇಗವಾಗಿ ವಾಹನ ಚಾಲನೆ-1,18,264
  • ಅಪಾಯಕಾರಿ  ವಾಹನ ಚಾಲನೆ-1,01,072
  • ಸಿಗ್ನಲ್ ಜಂಪಿಂಗ್-6,88,027
  • ಚಾಲನಾ ಪರವಾನಗಿ ಇಲ್ಲದೆ ಚಾಲನೆ -1,02,156
  • ಕರೆದೆಡೆಗೆ ಬಾಡಿಗೆಗೆ ಬಾರದಿರುವುದು-22,574
  • ದುಬಾರಿ ಬಾಡಿಗೆಗೆ ಒತ್ತಾಯ-13,104
  • ಶಿಸ್ತು ಪಥ ಉಲ್ಲಂಘನೆ-5,29,201
  • ಹೆಲ್ಮೆಟ್ ಇಲ್ಲದೆ ಚಾಲನೆ-16,67,248
  • ಮೊಬೈಲ್ ಬಳಕೆ-2,90,725

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com