ಹೆಡ್‌ಮಾಸ್ಟರ್‌ಗಿರಿ ಬೇಡ

ಸ್ಪೀಕರ್ ಕಾಗೋಡು ತಿಮ್ಮಪ್ಪ ಒಬ್ಬ ಮುತ್ಸದ್ಧಿ. ಆದರೆ ಅವರು ಹೆಡ್ ಮಾಸ್ತರ್ ರೀತಿ...
ಸ್ಪೀಕರ್ ಕಾಗೋಡು ತಿಮ್ಮಪ್ಪ (ಸಾಂದರ್ಭಿಕ ಚಿತ್ರ)
ಸ್ಪೀಕರ್ ಕಾಗೋಡು ತಿಮ್ಮಪ್ಪ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಸ್ಪೀಕರ್ ಕಾಗೋಡು ತಿಮ್ಮಪ್ಪ ಒಬ್ಬ ಮುತ್ಸದ್ಧಿ. ಆದರೆ ಅವರು ಹೆಡ್ ಮಾಸ್ತರ್ ರೀತಿ ವರ್ತಿಸಬಾರದು ಎಂದು ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

ಸಚಿವರಾದ ನಂತರ ಇದೇ ಮೊದಲ ಬಾರಿಗೆ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಸದನದ ಹೊರಗೆ ಹಿಂದಿನ ಸರ್ಕಾರದ ಜತೆ ಹೋಲಿಸಿ ಸ್ವಚ್ಛ ಮತ್ತು ಪಾರದರ್ಶಕ ಆಡಳಿತ ಎಲ್ಲಿದೆ ಎಂದು ಅವರು ಕೇಳಬಾರದು. ಇದರಿಂದ ನಮಗೆ ನೋವಾಗಿದೆಯೇ ಹೊರತು ಅವರ ಬಗ್ಗೆ ಅಸಮಾಧಾನವಿಲ್ಲ ಎಂದು ಹೇಳಿದರು.

ತಿಮ್ಮಪ್ಪನವರಿಗೆ ಅಪಾರ ಅನುಭವ ಇದೆ. ನಮಗೆಲ್ಲರಿಗೂ ಅವರ ಬಗ್ಗೆ ಗೌರವ ಇದೆ. ಸದನ ಕಲಾಪವನ್ನು ಅವರು ಅತ್ಯಂತ ಯಶಸ್ವಿಯಾಗಿ ನಿಭಾಯಿಸುತ್ತಾರೆ. ಸಂದರ್ಭ ಬಂದಾಗ ನನಗೂ ಚಾಟಿ ಏಟು ನೀಡಿದ್ದಾರೆ. ಸದನದೊಳಗೆ ಈ ರೀತಿ ಮಾತನಾಡುವುದಕ್ಕೆ ಅವರಿಗೆ ಅವಕಾಶವಿದೆ. ಆದರೆ ಅದು ಕೂಡಾ ನಿಯಮ ಪ್ರಕಾರವೇ ಇರಬೇಕು. ಆದರೆ ಸದನದ ಹೊರಗಡೆ ಹೆಡ್ ಮಾಸ್ತರ್‌ಗಿರಿ ಮಾಡುವುದು ಸಲ್ಲ. ಏಕೆಂದರೆ ನಾವ್ಯಾರು ವಿದ್ಯಾರ್ಥಿಗಳಲ್ಲ ಎಂದು ಪರೋಕ್ಷವಾಗಿ ತಿರುಗೇಟು ನೀಡಿದರು.

ಅಧ್ಯಕ್ಷಗಿರಿ ಆಸೆಯಿಲ್ಲ
ಹೋರಾಟದ ಹಿನ್ನೆಲೆಯಿಂದ ಬಂದ ನಾನು ಈಗೇನು ಆಗಿದ್ದೇನೆಯೋ ಅದರ ಬಗ್ಗೆ ತೃಪ್ತಿ ಇದೆ. ಕೆಪಿಸಿಸಿ ಅಧ್ಯಕ್ಷಗಿರಿ ಹೊರತುಪಡಿಸಿ ಕಾಂಗ್ರೆಸ್‌ನಲ್ಲಿ ಎಲ್ಲವನ್ನೂ ಅನವಭವಿಸಿದ್ದೇನೆ. ಆದರೆ ನನಗೆ ಕೆಪಿಸಿಸಿ ಅಧ್ಯಕ್ಷನಾಗಬೇಕೆಂಬ ಆಕಾಂಕ್ಷೆ ಇಲ್ಲ ಎಂದರು.

ರಾಜ್ಯ ಸರ್ಕಾರದ ಸಚಿವರು ಮತ್ತು ಶಾಸಕರ ಬಗ್ಗೆ ಪಕ್ಷ ಗುಪ್ತವಾಗಿ ಮೌಲ್ಯಮಾಪನ ಮಾಡಲು ಮುಂದಾಗಿರುವುದು ನಿಜಕ್ಕು ಸ್ವಾಗತಾರ್ಹ ಕ್ರಮ. ಬ್ಲಾಕ್ ಕಾಂಗ್ರೆಸ್ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಜತೆಗೆ ಕಾರ್ಯಕರ್ತರಿಂದಲೂ ವರದಿ ಪಡೆದುಕೊಳ್ಳಬೇಕು.  ಪ್ರತಿಪಕ್ಷಗಳು ನಮ್ಮ ಬಗ್ಗೆ ನಡೆಸುವ ಮೌಲ್ಯಮಾಪನ ಪೂರ್ವಗ್ರಹ ಪೀಡಿತವಾಗಿರಬಹುದು ಎಂದು ಹೇಳಿದರು.

ಕಾಂಗ್ರೆಸ್‌ನಲ್ಲಿ ದಲಿತರು ಸಿಎಂ ಆಗೇ ಆಗುತ್ತಾರೆ
ರಾಜ್ಯ ಕಾಂಗ್ರೆಸ್ ಘಟಕದಿಂದ ದಲಿತರು ಮುಖ್ಯಮಂತ್ರಿ ಆಗೇ ಆಗುತ್ತಾರೆ ಎಂದು ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಮುಖ್ಯಮಂತ್ರಿ ಆಗಬೇಕೆಂಬ ಹಂಬಲವಿಲ್ಲ. ಆದರೆ ರಾಜ್ಯದಲ್ಲಿ ದಲಿತ ಮುಖಂಡರೊಬ್ಬರನ್ನು ಮುಖ್ಯಮಂತ್ರಿಯಾಗಿ ಮಾಡುವ ಅವಕಾಶ ಇರುವುದು ಕಾಂಗ್ರೆಸ್‌ನಲ್ಲಿ ಮಾತ್ರ. ದಲಿತರು ಮುಖ್ಯಮಂತ್ರಿ ಆಗೇ ಆಗುತ್ತಾರೆ ಎಂದು ಹೇಳಿದರು.

ಈ ಅವಧಿಯಲ್ಲೇ ದಲಿತರು ಮುಖ್ಯಮಂತ್ರಿ ಆಗುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ದಲಿತರು ಮುಖ್ಯಮಂತ್ರಿ ಆಗುವುದಕ್ಕೆ ಅವಕಾಶವಿಲ್ಲ. ಆದರೆ ಕಾಂಗ್ರೆಸ್‌ನಲ್ಲಿ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com