'ದೆಹಲಿ ರಾಜಕೀಯ ಭವಿಷ್ಯ ಹಾಳುಮಾಡಿದ ಕೇಜ್ರಿವಾಲ್‌ನನ್ನು ಕಾಡಿಗೆ ಅಟ್ಟಿಸಿ'

ದೆಹಲಿಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ 24 ಗಂಟೆಗಳ ಕಾಲ ನಿರಂತರ ವಿದ್ಯುತ್ ನೀಡುವ ಆಶಯವನ್ನು...
ನರೇಂದ್ರ ಮೋದಿ, ಅಮಿತ್ ಶಾ
ನರೇಂದ್ರ ಮೋದಿ, ಅಮಿತ್ ಶಾ

ನವದೆಹಲಿ: ದೆಹಲಿಯ ಸರ್ಕಾರವನ್ನು ಒಂದು ವರ್ಷ ಕಾಲ ಹಾಳು ಮಾಡಿರುವ ಅರವಿಂದ್ ಕೇಜ್ರಿವಾಲ್‌ನನ್ನು ಕಾಡಿಗೆ ಅಟ್ಟಿಸಿ ಎಂದು ಪ್ರಧಾನಿ ನರೇಂದ್ರಮೋದಿ ಅರವಿಂದ್ ಕೇಜ್ರಿವಾಲ್ ವಿರುದ್ದ ಕಿಡಿ ಕಾರಿದ್ದಾರೆ.

ದೆಹಲಿ ರಾಜಕೀಯ ಭವಿಷ್ಯವನ್ನು ಹಾಳುಮಾಡಿದ ಆಪ್ ಸದಸ್ಯರು ಅರಾಜಕತವಾದಿಗಳು. ಅವರಿಗೆ ಮತದಾರ ಪ್ರಭುಗಳೇ ತಕ್ಕ ಶಿಕ್ಷೆ ನೀಡಬೇಕು ಎಂದು ಮೋದಿ ಆಪ್ ಪಕ್ಷದ ವಿರುದ್ಧ ಸಿಟ್ಟು ಪ್ರದರ್ಶಿಸಿದ್ದಾರೆ.

ದೆಹಲಿಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ 24 ಗಂಟೆಗಳ ಕಾಲ ನಿರಂತರ ವಿದ್ಯುತ್ ನೀಡುವ ಆಶಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವ್ಯಕ್ತಪಡಿಸಿದ್ದಾರೆ.

ಮುಂಬರುವ ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಅವರು, ಕಾಂಗ್ರೆಸ್ ಅಧಿಕಾರದಲ್ಲಿದ್ದ ರಾಜ್ಯಗಳಲ್ಲಿ ಬಿಜೆಪಿ ಇಂದು ಪ್ರಭುತ್ವ ಸಾಧಿಸಿದೆ. ಈ ಗೆಲುವಿಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾರಣಕರ್ತರಾಗಿದ್ದಾರೆ. ಅಮಿತ್ ಶಾ ಅತ್ಯಂತ ಯಶಸ್ವಿ ಅಧ್ಯಕ್ಷ ಎಂದು ಕೊಂಡಾಡಿದರು.

ಇದೇ ವೇಳೆ ಬಿಜೆಪಿ ಜಯಕ್ಕೆ ಶ್ರಮಿಸಿದ ಪಕ್ಷದ ಎಲ್ಲಾ ಕಾರ್ಯಕರ್ತರಿಗೂ ಅಭಿನಂದನೆ ಸಲ್ಲಿಸಿದರು. ಜತೆಗೆ 2014ರ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸುವ ಮೂಲಕ ಮೂರು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ರಚಿಸಿರುವ ಮುಖ್ಯಮಂತ್ರಿಗಳಾದ ಮಹಾರಾಷ್ಟ್ರದ ದೇವೇಂದ್ರ ಫಡ್ನಾವಿಸ್, ಜಾರ್ಖಂಡ್‌ನ ರಘುವರ್ ದಾಸ್ ಹಾಗೂ ಹರಿಯಾಣ ಸಿಎಂ ಮನೋಹರ್ ಲಾಲ್ ಕಟ್ಟರಿಗೆ ಅಭಿನಂದನೆ ಸಲ್ಲಿಸಿದರು.

ದೇಶದ ಬಡವರ ನಂಬಿಕೆಯನ್ನು ಗಳಿಸುವಲ್ಲಿ ಬಿಜೆಪಿ ಸಫಲವಾಗಿದೆ. ಈಗಾಗಿಯೇ ಬಡವರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ದೇಶದ ಜನ ಏನು ಬಯಸುತ್ತಾರೆ ಅದನ್ನೆ ದೆಹಲಿ ಬಯಸುತ್ತದೆ. ಕೇವಲ ಘೋಷಣೆ ಮೂಲಕ ದೇಶದ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಸಾಕಷ್ಟು ಶ್ರಮವಹಿಸಬೇಕಿದೆ ಎಂದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದ ರಾಜ್ಯಗಳಲ್ಲಿ ಬಿಜೆಪಿ ಇಂದು ಪ್ರಭುತ್ವ ಸಾಧಿಸಿದೆ. ಅಭಿವೃದ್ಧಿಯ ಮೂಲಮಂತ್ರ ಹೊತ್ತು ತಂದಿರುವ ಬಿಜೆಯತ್ತ ದೇಶದ ಜನ ನೋಡುವಂತಾಗಿದೆ. ಈಗಾಗಿಯೇ ಹರಿಯಾಣ, ಜಾರ್ಖಂಡ್‌ನಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚಿಸಿದೆ ಎಂದರು.

ಹರಿಯಾಣದಲ್ಲಿದ್ದ ವಂಶಪಾರಂಪರ್ಯ ಆಡಳಿತಕ್ಕೆ ಅಂತ್ಯ ಹಾಡಲಾಗಿದ್ದು ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅದೇ ರೀತಿ ಜಮ್ಮು ಕಾಶ್ಮೀರದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ. ಈ ಹಿಂದಿನ ಚುನಾವಣೆಗೆ ಹೋಲಿಸಿಕೊಂಡರೆ ಪ್ರಸ್ತುತ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸಾಧನೆ ಮಾಡಿದೆ. ಇದಕ್ಕೆ ಕಾರಣ ಜಮ್ಮು ಮತ್ತು ಕಾಶ್ಮೀರ ಜನತೆ ಬಿಜೆಪಿ ಮೇಲೆ ನಂಬಿಕೆಯಿಟ್ಟು ಭಯೋತ್ಪಾದನೆ, ಆತಂಕದ ವಾತಾವರಣ ಮೆಟ್ಟಿ ಮತ ನೀಡಿರುವುದಕ್ಕೆ ಅಭಿನಂದಿಸಿದರು.

10 ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿತ: ಅಮಿತ್ ಶಾ
ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಮ್‌ಲೀಲಾ ಮೈದಾನದಲ್ಲಿ ಬಿಜೆಪಿ ಬೃಹತ್ ರ್ಯಾಲಿಯನ್ನು ಹಮ್ಮಿಕೊಂಡಿತ್ತು. ಈ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಬಿಜೆಪಿ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಹಣದುಬ್ಬರವನ್ನು ಕಡಿಮೆ ಮಾಡಿದೆ ಎಂದರು.

ಕೌಶಲ್ಯ ಅಭಿವೃದ್ದಿಗೆ ಹೆಚ್ಚು ಹೊತ್ತು ನೀಡಲಾಗಿದೆ. ಅದನ್ನು ಕಾರ್ಯಗತಗೊಳಿಸುವ ಸಲುವಾಗಿ ಕೌಶಲ್ಯ ಅಭಿವೃದ್ಧಿ ಸಚಿವಾಲಯವನ್ನು ಸ್ಥಾಪಿಸಲಾಗಿದೆ.

ಕಪ್ಪುಹಣ ವಾಪಸ್ ತರುವ ವಿಚಾರ ಸಂಕೀರ್ಣ ಸಮಸ್ಯೆಯಾಗಿದೆ. ಅನೇಕ ರಾಷ್ಟ್ರಗಳ ಸರ್ಕಾರ, ಕಾನೂನಿನ ತೊಡಕಿದೆ ಎಂದರು. ಆದರು ಕಪ್ಪು ಹಣ ವಾಪಸ್ ತರುವುದಕ್ಕಾಗಿ ಎಸ್‌ಐಟಿಯನ್ನು ನೇಮಿಸಲಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com