
ಬೆಂಗಳೂರು: ನಿಷೇಧಿತ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಯ ನಂಟು ಹೊಂದಿರುವ ಆರೋಪದ ಮೇಲೆ ಸಿಸಿಬಿ ಪೊಲೀಸರಿಂದ ಬಂಧಿತರಾಗಿರುವ ಮೂವರು ಶಂಕಿತ ಉಗ್ರರು, 2013ರ ಫೆಬ್ರವರಿ 21ರಂದು ಹೈದರಾಬಾದ್‌ನ ದಿಲ್‌ಸುಖ್ ನಗರದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ತಮ್ಮ ಕೈವಾಡ ಇರುವ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ ಎಂದು ಪೊಲೀಸ್ ಮಾಹಿತಿ ತಿಳಿಸಿವೆ.
ಇದೇ ವೇಳೆ, ಕಳೆದ ವರ್ಷ ಚೆನ್ನೈ ರೈಲು ನಿಲ್ದಾಣದಲ್ಲಿ ಚೆನ್ನೈ-ಗುವಾಹಟಿ ರೈಲಿನಲ್ಲಿ ಸಂಭವಿಸಿದ ಸ್ಫೋಟದ ಬಗ್ಗೆಯೂ ಬಂಧಿತ ಡಾ.ಸೈಯ್ಯದ್ ಇಸ್ಮಾಯಿಲ್ ಅಫಕ್, ಅಬ್ದುಸ್ ಸಬೂರ್ ಹಾಗೂ ಸದ್ದಾಂ ಹುಸೇನ್ ಬಾಯ್ಬಿಟ್ಟಿದ್ದಾರೆ. ಆದರೆ, ಕಳೆದ ಡಿ.28ರಂದು ಚರ್ಚ್‌ಸ್ಟ್ರೀಟ್‌ನಲ್ಲಿ ಸಂಭವಿಸಿದ ಲಘು ಬಾಂಬ್ ಸ್ಫೋಟದಲ್ಲಿ ಇವರ ಕೈವಾಡ ಇರುವ ಬಗ್ಗೆ ಮಾಹಿತಿ ಕಲೆ ಹಾಕಬೇಕಿದೆ ಎಂದು ಮೂಲಗಳು ತಿಳಿಸಿವೆ.
ನ್ಯಾಯಾಲಯದ ಅನುಮತಿ ಮೇರೆಗೆ ಜ.21ರವರೆಗೆ ಸೈಯದ್ ಇಸ್ಮಾಯಿಲ್ ಅಫಕ್, ಅಬ್ದುಸ್ ಸಬೂರ್ ಮತ್ತು ಸದ್ದಾಂ ಹುಸೇನ್‌ನನ್ನು ವಶಕ್ಕೆ ಪಡೆದ ಸಿಸಿಬಿ ಅಧಿಕಾರಿಗಳು ನಿರಂತರವಾಗಿ 20 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿ ಮಹತ್ವದ ಮಾಹಿತಿ ಕಲೆಹಾಕಿದ್ದಾರೆ. ವಿಚಾರಣೆ ವೇಳೆ ಇಸ್ಮಾಯಿಲ್ ಹಲವು ಮಾಹಿತಿ ನೀಡಿದ್ದಾನೆ.
ಭಟ್ಕಳದಿಂದ ಬಾಂಬ್ ಪೂರೈಕೆ
2010ರಿಂದ ನಿಷೇಧಿತ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆ ಜತೆ ಸಂಪರ್ಕ ಹೊಂದಿದ್ದು, ಮುಖಂಡರ ನಿರ್ದೇಶನದಂತೆಕಾರ್ಯ ನಿರ್ವಹಿಸುತ್ತಿದ್ದೆವು. ಹೈದರಾಬಾದ್ ಮತ್ತು ಚೆನ್ನೈ ಸ್ಫೋಟಕ್ಕೆ ಸುಧಾರಿತ ಬಾಂಬ್‌ಗಳನ್ನು ತಯಾರಿಸಿ ಪೂರೈಸಿದ್ದಾಗಿ ಶಂಕಿತ ಉಗ್ರ ಸೈಯದ್ ಇಸ್ಮಾಯಿಲ್ಲ್ ಅಫಕ್ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.
ಬಂಧಿತ ಶಂಕಿತ ಉಗ್ರರ ಬಳಿ ಪತ್ತೆಯಾಗಿರುವ ಅಮೋನಿಯಂ ನೈಟ್ರೇಟ್, ಪಿವಿಸಿ ಪೈಪ್, ಎಲೆಕ್ಟ್ರಿಕಲ್ ಸರ್ಕ್ಯೂಟ್ ಮತ್ತಿತರ ಬಾಂಬ್ ತಯಾರಿಕಾ ವಸ್ತುಗಳಿಗೂ ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ ಪತ್ತೆಯಾದ ಸ್ಫೋಟಕಗಳಿಗೂ ಬಹುತೇಕ ಸಾಮ್ಯತೆ ಇರುವುದ ಕಂಡು ಬಂದಿರುವುದರಿಂದ ಇವರೇ ಬಾಂಬ್ ಪೂರೈಸಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪಾಕ್‌ಗೆ ಹೋಗಿ ಬಂದಿದ್ದ
ಸೈಯದ್ ಇಸ್ಮಾಯಿಲ್ ಅಫಕ್ ಪಾಕಿಸ್ತಾನಕ್ಕೆ ಹೋಗಿ ಬಂದಿರುವುದು ತನಿಖೆಯಲ್ಲಿ ಖಚಿತವಾಗಿದೆ. ಉಳಿದವರು ವಿದೇಶಕ್ಕೆ ಹೋಗಿರುವುದು ಈ ವರೆಗಿನ ತನಿಖೆಯಲ್ಲಿ ಗೊತ್ತಾಗಿಲ್ಲ. ಆದರೆ, ವಿದೇಶದಲ್ಲಿರುವ ಮುಖಂಡರ ನಿರ್ದೇಶನದಂತೆ ಕಾರ್ಯ ನಿರ್ವಹಿಸುತ್ತಿದ್ದರು. ಆ ವ್ಯಕ್ತಿಯ ಬಗ್ಗೆ ಹುಡುಕಾಟ ಮುಂದುವರೆದಿದೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ತಿಳಿಸಿದ್ದಾರೆ. ತನಿಖಾಧಿಕಾರಿಗಳು ವಿಚಾರಣೆಯ ಆಳಕ್ಕೆ ಇಳಿಯಬೇಕಿದೆ. ಅದಕ್ಕೆ ಕಾಲಾವಕಾಶ ಬೇಕು. ಬೇರೆ ಬೇರೆ ಕೋನಗಳಲ್ಲಿ ಪ್ರಕರಣವನ್ನು ಗಮನಿಸಲಾಗುತ್ತಿದೆ. ತನಿಖೆ ವರದಿ ಬಂದ ಬಳಿಕವೇ ಮಾಹಿತಿ ನೀಡಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.
Advertisement