ಪಾಟ್ನಾ, ಬೋಧಗಯಾ ಸ್ಫೋಟದಲ್ಲೂ ಕೈವಾಡ?
ಬೆಂಗಳೂರು: ಬಿಹಾರದ ಪಾಟ್ನಾದಲ್ಲಿ 2013 ಅಕ್ಟೋಬರ್ 27ರಂದು ನರೇಂದ್ರ ಮೋದಿ ಅವರ ಪ್ರಚಾರ ರ್ಯಾಲಿ ವೇಳೆ ಸಂಭವಿಸಿದ ಸ್ಫೋಟದಲ್ಲೂ ಬಂಧಿತ ಶಂಕಿತ ಉಗ್ರರ ಕೈವಾಡವಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಈ ಸಂಬಂಧ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಟ್ವೀಟ್ ಮಾಡಿದ್ದು, ಅನುಮಾನಕ್ಕೆ ಪುಷ್ಠಿ ನೀಡಿದೆ. ಶಂಕಿತ ಉಗ್ರರಾದ ಸೈಯದ್ ಇಸ್ಮಾಯಿಲ್ ಅಫಕ್, ಅಬ್ದುಸ್ ಸಬೂರ್ ಮತ್ತು ಸದ್ದಾಂ ಹುಸೇನ್‌ನ ವಿಚಾರಣೆಯನ್ನು ಭಾನುವಾರ ಮುಂದುವರಿಸಿದ ತನಿಖಾಧಿಕಾರಿಗಳ ತಂಡ ಮತ್ತಷ್ಟು ಮಹತ್ವದ ಮಾಹಿತಿ ಕಲೆಹಾಕಿದೆ.
2013 ಜು.7ರಂದು ಬಿಹಾರದ ಬೋಧಗಯಾದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲೂ ಬಂಧಿತರ ನಂಟಿರುವುದು ವಿಚಾರಣೆ ವೇಳೆ ಬಹಿರಂಗವಾಗಿದೆ.
ಮ್ಯಾನ್ಮಾರ್‌ನಲ್ಲಿ ಮುಸ್ಲಿಮರ ಮೇಲೆ ನಡೆದಿದೆ ಎನ್ನಲಾದ ದೌರ್ಜನ್ಯಕ್ಕೆ ಪ್ರತೀಕಾರವಾಗಿ ಬೋಧಗಯಾದಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಸಿಮಿ ಸಂಘಟನೆಯ ಹೈದರ್ ಅಲಿ, ಮುಜಿಬುಲ್ಲಾ ಮತ್ತು ತೌಫಿಕ್ ಅನ್ಸಾರಿ ಎಂಬುವರನ್ನು ಬಂಧಿಸಿದ್ದ ಎನ್‌ಐಎ ಅಧಿಕಾರಿಗಳು ಈಗಾಗಲೇ ಚಾರ್ಜ್‌ಶೀಟ್ ಕೂಡ ಸಲ್ಲಿಸಿದ್ದಾರೆ.
ಬೋಧಗಯಾ ಬಾಂಬ್ ಸ್ಫೋಟಕ್ಕೆ ಸ್ಫೋಟಕ ವಸ್ತುಗಳನ್ನು ಸರಬರಾಜು ಮಾಡಿರುವ ಬಗ್ಗೆ ಪೊಲೀಸರು ಕಲೆ ಹಾಕುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ