
ನವದೆಹಲಿ: ಯೋಜನಾ ಆಯೋಗ ಆಯ್ತು, ಇನ್ನು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ(ಯುಜಿಸಿ)ಕ್ಕೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕತ್ತರಿ ಹಾಕಲು ವೇದಿಕೆ ಸಿದ್ಧ ಮಾಡಿದೆ!
ಯೋಜನಾ ಆಯೋಗದ ಜಾಗದಲ್ಲಿ ನೀತಿ ಆಯೋಗ ರಚಿಸಿರುವ ಸರ್ಕಾರ, ಯುಜಿಸಿ ವಿಚಾರದಲ್ಲೂ ಇದೇ ರೀತಿಯ ಕ್ರಮ ಅನುಸರಿಸಲು ಮುಂದಾಗಿದೆ. ಯುಜಿಸಿ ಜಾಗದಲ್ಲಿ ಅಸ್ತಿತ್ವಕ್ಕೆ ಬರಲಿರುವ ಹೊಸ ಸಂಸ್ಧೆಗೆ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಆಯೋಗ ಎಂದು ಹೆಸರಿಡುವ ಸಾಧ್ಯತೆ ಇದೆ. ಮಾಜಿ ಯುಜಿಸಿ ಮುಖ್ಯಸ್ಥ ಹರಿ ಗೌತಂ ನೇತೃತ್ವದಲ್ಲಿ ರಚಿಸಲಾಗಿರುವ ಮೂವರು ಸದಸ್ಯರ ಸಮಿತಿಯ ಶಿಫಾರಸಿನಂತೆ ಸರ್ಕಾರ ಈ ಕ್ರಮ ಕೈಗೊಳ್ಳಲಿದೆ. ಅಸ್ತಿತ್ವಕ್ಕೆ ಬರಲಿರುವ ಆಯೋಗಕ್ಕೆ ಸಂಬಂಧಿಸಿದ ನೀಲಿ ನಕಾಶೆ ಈಗಾಗಲೇ ಸರ್ಕಾರದ ಮುಂದಿದೆ.
ಹೊಸ ಸಂಸ್ಥೆಯು ಕಾಯಂ ಸದಸ್ಯರನ್ನು ಒಳಗೊಳ್ಳಲಿದೆ. ಜತೆಗೆ, ನೀತಿ ಆಯೋಗದಂತೆ ಎಲ್ಲ ರಾಜ್ಯಗಳಿಗೂ ಇದರಲ್ಲಿ ಪ್ರಾತಿನಿಧ್ಯ ಸಿಗಲಿದೆ. ಇದರೊಂದಿಗೆ ಯುಜಿಸಿಗೆ ಒಂದಷ್ಟು ಅಧಿಕಾರಿಗಳೂ ಸಿಗಲಿದೆ. ಅದರಂತೆ ನಕಲಿ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿ ಜೈಲು ಶಿಕ್ಷೆಯನ್ನು ಶಿಫಾರಸು ಮಾಡುವ ಅಧಿಕಾರ ನೀಡುವ ನಿರೀಕ್ಷೆ ಇದೆ.
ಮತ್ತಿನ್ನೇನು ಬದಲಾವಣೆ?
ಆಲ್ ಇಂಡಿಯಾ ಕೌನ್ಸಿನ್ ಆಫ್ ಟೆಕ್ನಿಕಲ್ ಎಜುಕೇಷನ್, ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರರ್ ರಿಸರ್ಚ್‌ನಂಥ ವಿವಿಧ ಶಿಕ್ಷಣ ಸಮಿತಿಗಳು ಸದಸ್ಯರಾಗಿರುವ ಆಡಳಿತ ಸಮಿತಿಯನ್ನೂ ಹೊಂದಿರಲಿದೆ.
ನೆಹರೂ ಸ್ಥಾಪಿಸಿದ 2ನೇ ಸಂಸ್ಥೆ!
ಯೋಜನಾ ಆಯೋಗದಂತೆ ಯುಜಿಸಿ ಕೂಡ ಸ್ಥಾಪನೆಯಾದದ್ದು ನೆಹರೂ ಅವಧಿಯಲ್ಲೇ. ಈ ಸಂಸ್ಧೆಗೂ ಸರ್ಕಾರ ತಿಲಾಂಜಲಿ ನೀಡದರೆ ಮೋದಿ ಸರ್ಕಾರ ರದ್ದು ಮಾಡುತ್ತಿರುವ ನೆಹರೂ ಅವಧಿಯಲ್ಲಿ ಸ್ಥಾಪಿಸಿದ 2ನೇ ಸಂಸ್ಥೆ ಇದಾಗಲಿದೆ.
Advertisement