ಭಯೋತ್ಪಾದನಾ ನಿಗ್ರಹ ಹೊರಾಟದಲ್ಲಿ ಭಾರತಕ್ಕೆ ಸಾಥ್: ಜಾನ್ ಕೆರ್ರಿ

ಗುಜರಾತ್‌ನ ಗಾಂಧಿನಗರದಲ್ಲಿ ನಡೆಯುತ್ತಿರುವ 'ವೈಬ್ರಂಟ್ ಗುಜರಾತ್‌' ಸಮ್ಮೇಳನದಲ್ಲಿ ಭಾಗವಹಿಸಿರುವ ಜಾನ್ ಕೆರ್ರಿ...
ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ (ಸಂಗ್ರಹ ಚಿತ್ರ)
ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ (ಸಂಗ್ರಹ ಚಿತ್ರ)

ಗಾಂಧಿನಗರ: ಭಯೋತ್ಪಾದನಾ ನಿಗ್ರಹ ಹೋರಾಟದಲ್ಲಿ ಅಮೆರಿಕ ಭಾರತದೊಂದಿಗೆ ನಿಲ್ಲುತ್ತದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಹೇಳಿದ್ದಾರೆ.

ಗುಜರಾತ್‌ನ ಗಾಂಧಿನಗರದಲ್ಲಿ ನಡೆಯುತ್ತಿರುವ 'ವೈಬ್ರಂಟ್ ಗುಜರಾತ್‌' ಸಮ್ಮೇಳನದಲ್ಲಿ ಭಾಗವಹಿಸಿರುವ ಜಾನ್ ಕೆರ್ರಿ ಅವರು, ಭಾರತ ಮತ್ತು ಅಮೆರಿಕ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಬಹಳ ಮುಖ್ಯವಾಗಿದೆ. ಹೀಗಾಗಿ ಉಭಯ ದೇಶಗಳು ಈ ವಿಭಾಗದಲ್ಲಿ ಸಾಕಷ್ಟು ಶ್ರಮಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

'ವಿಶ್ವದ ಹಳೆಯ ಪ್ರಜಾಪ್ರಭುತ್ವ (ಅಮೆರಿಕ) ಮತ್ತು ವಿಶ್ವದ ದೊಡ್ಡ ಪ್ರಜಾಪ್ರಭುತ್ವ (ಭಾರತ) ಒಗ್ಗೂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಭೇಟಿ ವೇಳೆ ಉಭಯ ದೇಶಗಳ ನಡುವಿನ ಆರ್ಥಿಕ ಸಂಬಂಧಗಳ ವೃದ್ಧಿ ಮತ್ತು ಅದರ ಮುಂದುವರಿಕೆ ಕುರಿತು ಸಾಕಷ್ಟು ಚರ್ಚಿಸಿದ್ದೇವೆ. ಆರ್ಥಿಕ ಪ್ರಗತಿ ಕುರಿತಂತೆ ನಮ್ಮ ಮುಂದೆ ಸಾಕಷ್ಟು ಅವಕಾಶಗಳಿದ್ದು, ನಾವು ಅವುಗಳ ಸದ್ಭಳಕೆ ಮಾಡಿಕೊಳ್ಳಬೇಕು ಮತ್ತು ಮುಂದುವರೆಸಿಕೊಂಡು ಹೋಗಬೇಕು' ಎಂದು ಕೆರ್ರಿ ಹೇಳಿದರು. ಅಲ್ಲದೆ ಭಾರತದಲ್ಲಿ ಅಮೆರಿಕ ಹೂಡಬಯಸಿರುವ ಬಂಡವಾಳದ ಪ್ರಮಾಣವನ್ನು 2.4 ಬಿಲಿಯನ್‌ನಿಂದ 24 ಬಿಲಿಯನ್‌ಗೆ ಏರಿಸಿರುವ ಕುರಿತು ಕೆರ್ರಿ ಮಾಹಿತಿ ನೀಡಿದರು.

ಇದೇ ವೇಳೆ ಜಾಗತಿಕ ಭಯೋತ್ಪಾದನೆ ಕುರಿತು ಮಾತನಾಡಿದ ಜಾನ್ ಕೆರ್ರಿ, 'ಭಯೋತ್ಪಾದನೆ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ. ಭಯೋತ್ಪಾದನಾ ನಿಗ್ರಹ ಸಂಬಂಧ ಭಾರತ ಮತ್ತು ಅಮೆರಿಕ ದೇಶಗಳ ನಡುವಿನ ಸಂಬಂಧ ಉತ್ತಮವಾಗಿದ್ದು, ಇದನ್ನು ಇನ್ನಷ್ಟು ಉತ್ತಮಗೊಳಿಸಬೇಕಿದೆ. ಭಾರತ ಪ್ರವಾಸದ ಕುರಿತಂತೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಬಹಳ ಉತ್ಸುಕರಾಗಿದ್ದು, ಎರಡನೇ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿರುವ ಕುರಿತು ಒಬಾಮ ಅವರಿಗೆ ಬಹಳ ಖುಷಿಯಿದೆ' ಎಂದು ಕೆರ್ರಿ ಹೇಳಿದರು.

ಇದೇ ಜನವರಿ 26ರಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಪಾಲ್ಗೊಳ್ಳಲಿದ್ದು, ಶೀಘ್ರದಲ್ಲಿಯೇ ಭಾರತಕ್ಕೆ ಆಗಮಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com