
ನವದೆಹಲಿ: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಭಾರತ ಪ್ರವಾಸದ ವೇಳೆ ದುಷ್ಕೃತ್ಯವೆಸಗಲು ಗಡಿಯಲ್ಲಿ ಸುಮಾರು 200 ಮಂದಿ ಉಗ್ರರು ಹವಣಿಸುತ್ತಿದ್ದಾರೆ ಎಂದು ಭಾರತೀಯ ಸೇನೆ ಎಚ್ಚರಿಕೆ ನೀಡಿದೆ.
ಇದೇ ಜನವರಿ 26ರಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತಕ್ಕೆ ಆಗಮಿಸಲಿದ್ದು, ಈ ವೇಳೆ ದೇಶಾದ್ಯಂತ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಉಗ್ರರು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಸೇನಾಧಿಕಾರಿ ಲೆ. ಜನರಲ್ ಕೆಹೆಚ್ ಸಿಂಗ್ ಅವರು ಹೇಳಿದ್ದಾರೆ.
ಈ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಹೆಚ್ ಸಿಂಗ್ ಅವರು, ಗಡಿಯಲ್ಲಿ ಇನ್ನೂ ಸುಮಾರು 200ಕ್ಕೂ ಅಧಿಕ ಉಗ್ರರು ಭಾರತದ ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದಾರೆ. ಅಮೆರಿಕ ಅಧ್ಯಕ್ಷರ ಭಾರತ ಪ್ರವಾಸದ ವೇಳೆ ದುಷ್ಕೃತ್ಯಗಳನ್ನು ನಡೆಸಲು ಅವರು ಸಂಚು ರೂಪಿಸಿದ್ದಾರೆ ಎಂದು ಹೇಳಿದರು.
'ಜಮ್ಮು ಮತ್ತು ಕಾಶ್ಮೀರ ಗಡಿಯ ಪಿರ್ ಪಾಂಚಾಲ್ ಭಾಗದಲ್ಲಿರುವ 36 ಲಾಂಚ್ ಪ್ಯಾಡ್‌ಗಳಲ್ಲಿ 200ಕ್ಕೂ ಅಧಿಕ ಉಗ್ರರು ಇರುವ ಕುರಿತು ಮಾಹಿತಿ ಲಭ್ಯವಾಗಿದ್ದು, ಇವರು ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸುತ್ತಿದ್ದಾರೆ. ಇನ್ನೊಂದೆಡೆ ಉಗ್ರರಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನ ಸೇನೆ ಭಾರತೀಯ ಗಡಿಗಳತ್ತ ಗುಂಡಿನ ದಾಳಿ ನಡೆಸುವ ಮೂಲಕ ಭಾರತೀಯ ಸೇನೆಯ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿವೆ. ಆ ಮೂಲಕ ಉಗ್ರರನ್ನು ನಿರಾಯಾಸವಾಗಿ ಭಾರತೀಯ ಗಡಿಯೊಳಗೆ ಕಳುಹಿಸುವ ಹುನ್ನಾರವನ್ನು ಪಾಕಿಸ್ತಾನ ಸೇನೆ ಮಾಡುತ್ತಿದೆ' ಎಂದು ಸಿಂಗ್ ಆರೋಪಿಸಿದರು.
ಸೇನಾ ಮೂಲಗಳ ಪ್ರಕಾರ ಉಗ್ರರು ಭಾರತೀಯ ಗಡಿಗಳಲ್ಲಿರುವ ಶಾಲೆ, ಸಾರ್ವಜನಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದೇ ಜನವರಿ 25ರಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತಕ್ಕೆ ಆಗಮಿಸಲಿದ್ದು, ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲ್ಲಿದ್ದಾರೆ. ಒಬಾಮ ಅವರೊಂದಿಗೆ ಅವರ ಪತ್ನಿ ಮಿಶೆಲ್ ಒಬಾಮ ಅವರು ಕೂಡ ಭಾರತಕ್ಕೆ ಆಗಮಿಸಲಿದ್ದಾರೆ.
Advertisement