ಗಣರಾಜ್ಯೋತ್ಸವಕ್ಕೆ ನಗರದಲ್ಲಿ ಬಿಗಿ ಭದ್ರತೆ

ಚರ್ಚ್ ಸ್ಚ್ರೀಟ್‌ನಲ್ಲಿ ಸಂಭವಿಸಿದ ಸ್ಫೋಟ ಹಾಗೂ ಶಂಕಿತ ಉಗ್ರರ ಬಂಧನ ಹಿನ್ನೆಲೆಯಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಚರ್ಚ್ ಸ್ಚ್ರೀಟ್‌ನಲ್ಲಿ ಸಂಭವಿಸಿದ ಸ್ಫೋಟ ಹಾಗೂ ಶಂಕಿತ ಉಗ್ರರ ಬಂಧನ ಹಿನ್ನೆಲೆಯಲ್ಲಿ, ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬಿಗಿ ಬಂದೋಬಸ್ತ್ ಕೈಗೊಂಡಿರುವ ಪೊಲೀಸರು ಈಗಾಗಲೇ ಮೈದಾನದ ಮೇಲೆ ನಿಗಾ ಇರಿಸಿದ್ದಾರೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಬಂದೋಬಸ್ತ್ ಕೈಗೊಳ್ಳಲಾಗಿದೆ. ಈಗಾಗಲೇ 12 ಪೊಲೀಸರನ್ನು ನಿಯೋಜಿಸಲಾಗಿದೆ. ನಿರಂತರವಾಗಿ ಪೊಲೀಸ್ ಗಸ್ತು ನಡೆಯುತ್ತಿದೆ. ಮೈದಾನ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ ಎಂದು ಕೇಂದ್ರ ವಿಭಾಗ ಡಿಸಿಪಿ ಸಂದೀಪ್ ಪಾಟೀಲ್ ತಿಳಿಸಿದರು.

ಬಿಬಿಎಂಪಿ ಅಧಿಕಾರಿಗಳು ಕೆಲಸದಲ್ಲಿ ತೊಡಗಿದ್ದು ಅವರಿಗೆ ಐಡಿ ಕಾರ್ಡ್ ನೀಡಲಾಗಿದ್ದು ಕಡ್ಡಾಯವಾಗಿ ಹಾಕಿಕೊಳ್ಳುವಂತೆ ಸೂಚಿಸಲಾಗಿದೆ. ಮೈದಾನಕ್ಕೆ ತೆರಳಲು ಅವರು ಐಡಿ ಕಾರ್ಡ್ ತೋರಿಸಬೇಕು. ಸದ್ಯಕ್ಕೆ 6 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ವಿಡಿಯೋ ಮೇಲೆ ನಿಗಾ ಇರಿಸಲಾಗುತ್ತದೆ. ಮೈದಾನದ ಹೊರಗೆ ಹಾಗೂ ಒಳಗೆ ಇನ್ನೂ 10 ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತದೆ ಎಂದರು.

ಮೈದಾನಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‌ಸ್ಟ್ರೀಟ್ ಸುತ್ತಮುತ್ತಲಿನ ರಸ್ತೆಗಳಲ್ಲಿ ನಿಗಾ ಇರಿಸಲಾಗಿದ್ದು ಶ್ವಾನದಳ ತಪಾಸಣೆ ನಡೆಸುತ್ತಿವೆ.

ಆಯುಕ್ತರಿಂದ ಸಭೆ

ನಗರದ ಹೋಟೆಲ್ ಮಾಲೀಕರ ಸಂಘ ಹಾಗೂ ಲಾಡ್ಜ್‌ಗಳ ಮಾಲೀಕರ ಸಂಘದ ಸದಸ್ಯರೊಂದಿಗೆ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಬುಧವಾರ ಸಭೆ ನಡೆಸಿದರು.

ಲಾಡ್ಜ್‌ಗಳಲ್ಲಿ ಉಳಿದುಕೊಳ್ಳುವ ಪ್ರತಿಯೊಬ್ಬರ ಮೇಲೆ ನಿಗಾ ಇರಿಸಬೇಕು. ಅವರ ಹೆಸರು, ವಿಳಾಸ ಮಾಹಿತಿ ಜತೆಗೆ ಗುರುತಿನ ಚೀಟಿ ಪರಿಶೀಲಿಸಬೇಕು. ಅನುಮಾನಾಸ್ಪದ ನಡವಳಿಕೆ ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಪ್ರವೇಶ ದ್ವಾರಗಳಲ್ಲಿ ಸಿಸಿ ಕ್ಯಾಮೆರಾ ಕಡ್ಡಾಯವಾಗಿ ಇರಬೇಕು ಎಂದು ಸೂಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com