
ಕರಾಚಿ: ವಿವಾದಾತ್ಮಕ ವ್ಯಂಗ್ಯಚಿತ್ರ ಪ್ರಕಟಿಸಿ ಉಗ್ರರ ದಾಳಿಗೆ ಗುರಿಯಾಗಿದ್ದ ಚಾರ್ಲಿ ಹೆಬ್ಡೋ ಪತ್ರಿಕೆ ವಿರುದ್ಧ ಪಾಕಿಸ್ತಾನದ ಕರಾಚಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.
ಕರಾಚಿಯಲ್ಲಿ ನಡೆಯುತ್ತಿರುವ ಈ ಪ್ರತಿಭಟನೆ ಇದೀಗ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನೆ ವೇಳೆ ಪತ್ರಿಕಾ ಛಾಯಾಗ್ರಾಹಕನಿಗೆ ಗುಂಡು ತಗುಲಿದೆ ಎಂದು ತಿಳಿದುಬಂದಿದೆ. ಗುಂಡೇಟಿನಿಂದ ಗಾಯಗೊಂಡಿರುವ ಛಾಯಾಗ್ರಾಹಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ಗುಂಡೇಟಿನಿಂದ ಗಾಯಗೊಂಡಿರುವ ಛಾಯಾಗ್ರಹಕನನ್ನು ಆಸಿಫ್ ಹಸನ್ ಎಂದು ಗುರುತಿಸಲಾಗಿದ್ದು, ಈತ ಫ್ರೆಂಚ್ ದೇಶದ ಸುದ್ದಿಸಂಸ್ಥೆ ಎಎಫ್ಪಿಯ ಛಾಯಾಗ್ರಾಹಕನಾಗಿ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ. ಇನ್ನು ಘಟನೆ ಕುರಿತಂತೆ ಸ್ಪಷ್ಟನೆ ನೀಡಿರುವ ಕರಾಚಿ ಪೊಲೀಸ್ ವರಿಷ್ಠಾಧಿಕಾರಿ ಅಬ್ದುಲ್ ಖಲೀಖ್ ಶೇಖ್ ಅವರು, ಪ್ರತಿಭಟನೆ ವೇಳೆ ಯಾವುದೇ ಪೊಲೀಸರು ಗುಂಡು ಹಾರಿಸಿಲ್ಲ. ಪ್ರತಿಭಟನಾಕಾರರೇ ಗುಂಡು ಹಾರಿಸಿರಬಹುದು ಎಂದು ಹೇಳಿದ್ದಾರೆ.
ಇನ್ನು ಪ್ರತಿಭಟನೆ ವೇಳೆ ಗಾಯಗೊಂಡಿರುವ ಛಾಯಾಗ್ರಾಹಕ ಆಸಿಫ್ ಹಸನ್ ಹೇಳುವಂತೆ ಪೊಲೀಸರು ಪ್ರತಿಭಟನಾಕಾರರ ಮೇಲೆ ಜಲಫಿರಂಗಿಯನ್ನು ಪ್ರಯೋಗಿಸಿದಾಗ ಕೆಲ ಶಸ್ತ್ರಸಜ್ಜಿತ ವ್ಯಕ್ತಿಗಳು ಗುಂಡು ಹಾರಿಸಿದರು ಎಂದು ಹೇಳಿದ್ದಾರೆ.
ಸುಮಾರು 200ಕ್ಕೂ ಅಧಿಕ ಪ್ರತಿಭಟನಾಕಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಚಾರ್ಲಿ ಹೆಬ್ಡೋ ಪತ್ರಿಕೆ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಪ್ರತಿಭಟನಾಕಾರರಲ್ಲಿ ಬಹುತೇಕರು ಸ್ಥಳೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.
Advertisement