ಅರ್ಕಾವತಿ ಗೊಂದಲ: ತನಿಖೆಗೆ ಆಗ್ರಹ

ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ 2001ರಿಂದಲೂ ಯಾವ್ಯಾವ...
ಮಾಜಿ ಪ್ರಧಾನಿ ದೇವೇಗೌಡ
ಮಾಜಿ ಪ್ರಧಾನಿ ದೇವೇಗೌಡ

ಬೆಂಗಳೂರು: ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ 2001ರಿಂದಲೂ ಯಾವ್ಯಾವ ಸರ್ಕಾರದ ಅವಧಿಯಲ್ಲಿ ಏನಾಗಿದೆ ಎಂಬ ಸಂಪೂರ್ಣ ತನಿಖೆ ಅಗತ್ಯವಿದೆ. ಆದರೆ ಈ ಕಾರ್ಯಕ್ಕೆ ಸರ್ಕಾರ ಮುಂದಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿಗೆ ಕಂಟಕ ಎದುರಾಗಲಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡರು, ಅರ್ಕಾವತಿ ಡಿನೋಟಿಫಿಕೇಷನ್‌ಗೆ ಸಂಬಂಧಿಸಿದಂತೆ 2001ರಿಂದ ಮುಖ್ಯಮಂತ್ರಿ ತನಿಖೆಗೆ ಆದೇಶಿಸಿದ್ದೇ ಆದಲ್ಲಿ ಸಿದ್ದರಾಮಯ್ಯನವರು ತಮ್ಮ ಸ್ಥಾನ ಉಳಿಸಿಕೊಳ್ಳುವುದು ಕಷ್ಟ. ಈ ರೀತಿ ಮಾಡಿದ್ದೇ ಆದಲ್ಲಿ ತಿಪ್ಪೆಯಲ್ಲಿ ಕೈ ಹಾಕಿ ಹೊಲಸು ಕೆದಕಿದಂತಾಗುತ್ತದೆ ಎಂದು ವ್ಯಂಗ್ಯವಾಡಿದರು.

ಶಾಸಕ ಮುನಿರತ್ನ ವಿರುದ್ಧದ ಪ್ರಕರಣದ ತನಿಖೆ ಚುರುಕುಗೊಳಿಸಿದ್ದ ಲೋಕಾಯುಕ್ತ ಎಸ್‌ಪಿ ಡಾ.ಬಿ.ಎ. ಮಹೇಶ್ ಅವರ ವರ್ಗಾವಣೆ ಮಾಡುವ ಮೂಲಕ ಭ್ರಷ್ಟರ ರಕ್ಷಣೆಗೆ ಸಿದ್ದರಾಮಯ್ಯನವರ ಸರ್ಕಾರ ಮುಂದಾಗಿದೆ. ಇದನ್ನೆಲ್ಲಾ ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ, ಬೇರೊಂದು ಇಲಾಖೆಗೆ ವರ್ಗಾಯಿಸುವ ಬದಲು ಅವರಿದ್ದ ಸ್ಥಾನವನ್ನೇ ಮೇಲ್ದರ್ಜೆಗೆ ಏರಿಸಿ, ಅಲ್ಲಿಯೇ ಮುಂದುವರಿಸಲಬಹುದಿತ್ತು. ಶುದ್ಧ ಆಡಳಿತದ ಭರವಸೆ ನೀಡಿದ್ದ ಸಿಎಂ, ಪಕ್ಷದ ಶಾಸಕ ಮಣಿರತ್ನ, ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧವಾದರೂ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದರು.

ಬೀದಿಯಲ್ಲೇ ಕುರ್ಚಿ ಹಾಕಿ ಪಕ್ಷ ಕಟ್ಟುತ್ತೇನೆ
ಈಗಿರುವ ಪಕ್ಷದ ಕಚೇರಿ ಬಗ್ಗೆ ಯಾವುದೇ ವ್ಯಾಮೋಹವೂ ಇಲ್ಲ. ಕಾಂಗ್ರೆಸ್‌ಗೆ ಬಿಡುವ ಬಗ್ಗೆ ಯಾವುದೇ ಗೊಂದಲವೂ ಇಲ್ಲ. ಆದರೆ, ಉಳಿದೆರಡು ರಾಜಕೀಯ ಪಕ್ಷಗಳಿಗೆ ಸರ್ಕಾರ ಜಾಗ ನೀಡಿದ್ದು, ಸುಸಜ್ಜಿತ ಕಟ್ಟಡದಲ್ಲಿ ಕಚೇರಿ ನಡೆಸುತ್ತಿದ್ದಾರೆ. ಹಾಗೆಯೇ ನಮ್ಮ ಪಕ್ಷಕ್ಕೂ ಸರ್ಕಾರ ಜಾಗ ನೀಡಲಿ ಎಂದು ಆಗ್ರಹಿಸಿದರು. ಪಕ್ಷದ ಕಚೇರಿಗೆ ಸರ್ಕಾರ ಜಾಗ ನೀಡಿದರೆ ಸಂತೋಷ. ಇಲ್ಲವಾದಲ್ಲಿ ಬೀದಿಯಲ್ಲಿಯೇ ಕುರ್ಚಿ ಹಾಕಿಕೊಂಡು ಪಕ್ಷ ಕಟ್ಟುತ್ತೇನೆ. ಪಕ್ಷದ ಕಚೇರಿಗಾಗಿ ಖಾಸಗಿ ಕಟ್ಟಡವನ್ನು ಬಾಡಿಗೆ ಪಡೆಯಲು ಯತ್ನಿಸಲಾಗುತ್ತಿದೆ ಎಂದರು.

ಜ.24ರಂದು ಸದಸ್ಯತ್ವ ಅಭಿಯಾನ ಆರಂಭ
24ರಂದು ಅರಮನೆ ಮೈದಾನದಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನ ಆರಂಭಿಸಲಿದ್ದು, ಲಕ್ಷಾಂತರ ಜನರು ಸದಸ್ಯತ್ವ ಪಡೆಯಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com