ರಾಜಪಥದ ಮೇಲೆ ವಿಮಾನ ಹಾರಾಟ ನಿಷೇಧಕ್ಕೆ "ದೊಡ್ಡಣ್ಣ" ಷರತ್ತು

ಗಣರಾಜ್ಯೋತ್ಸವ ದಿನಾಚರಣೆಯಂದು ರಾಜಪಥದ ಸುತ್ತಮುತ್ತಲಿನ ಪ್ರದೇಶವನ್ನು "ವಿಮಾನ ಹಾರಾಟ ನಿಷಿದ್ಧ...
ರಾಜಧಾನಿ ದೆಹಲಿಯ ರಾಜಪಥದಲ್ಲಿ ಗಣರಾಜ್ಯೋತ್ಸವ ಸಂಭ್ರಮ (ಸಾಂದರ್ಭಿಕ ಚಿತ್ರ)
ರಾಜಧಾನಿ ದೆಹಲಿಯ ರಾಜಪಥದಲ್ಲಿ ಗಣರಾಜ್ಯೋತ್ಸವ ಸಂಭ್ರಮ (ಸಾಂದರ್ಭಿಕ ಚಿತ್ರ)
Updated on

ನವದೆಹಲಿ: ಗಣರಾಜ್ಯೋತ್ಸವ ದಿನಾಚರಣೆಯಂದು ರಾಜಪಥದ ಸುತ್ತಮುತ್ತಲಿನ ಪ್ರದೇಶವನ್ನು "ವಿಮಾನ ಹಾರಾಟ ನಿಷಿದ್ಧ ವಲಯ"ವೆಂದು ಘೋಷಿಸಬೇಕು ಅಮೆರಿಕ ಭಾರತವನ್ನು ಒತ್ತಾಯಿಸಿದೆ.

ಜನವರಿ 26ರಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸದಲ್ಲಿ ಪಾಲ್ಗೊಳ್ಳಲು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಆಗಮಿಸುವ ಹಿನ್ನಲೆಯಲ್ಲಿ ಅಂದು ರಾಜಪಥದ ಸುತ್ತಮುತ್ತ ವಿಮಾನ ಹಾರಾಟವನ್ನು ನಿಷೇಧಿಸಬೇಕು. ರಕ್ಷಣಾ ದೃಷ್ಟಿಯಿಂದ ಈ ಕ್ರಮ ಅತ್ಯಗತ್ಯ ಎಂದು ಅಮೆರಿಕ ಭಾರತವನ್ನು ಒತ್ತಾಯಿಸಿದೆ. ಆದರೆ ಅಮೆರಿಕದ ಪ್ರಸ್ತಾಪವನ್ನು ಭಾರತ ತಿರಸ್ಕರಿಸಿದ್ದು, ಅಧ್ಯಕ್ಷರ ಭದ್ರತೆ ಕುರಿತಂತೆ ಎಲ್ಲ ರೀತಿಯ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಮೆರಿಕದ ಭದ್ರತಾ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದೆ.

ಮೂಲಗಳ ಪ್ರಕಾರ ಬರಾಕ್ ಒಬಾಮ ಅವರ ಭಾರತ ಭೇಟಿ ಕುರಿತಂತೆ ಶ್ವೇತಭವನ ಭಾರತಕ್ಕೆ ಹಲವು ಷರತ್ತುಗಳನ್ನು ವಿಧಿಸಿದ್ದು, ಬಹುತೇಕ ಷರತ್ತುಗಳು ಒಬಾಮ ಅವರ ಭದ್ರತೆ ಕುರಿತ ಷರತ್ತುಗಳಾಗಿವೆ ಎಂದು ಹೇಳಲಾಗುತ್ತಿದೆ. ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ ಮುಖ್ಯ ಅತಿಥಿಗಳು ರಾಷ್ಟ್ರಪತಿಗಳೊಂದಿಗೆ ಕಾರಿನಲ್ಲಿ ರಾಜಪಥಕ್ಕೆ ಆಗಮಿಸುವುದು ಸಂಪ್ರದಾಯವಾದರೂ, ಇದಕ್ಕೆ ಶ್ವೇತಭವನ ಆಕ್ಷೇಪ ವ್ಯಕ್ತಪಡಿಸಿದೆ. ಅಮೆರಿಕ ಅಧ್ಯಕ್ಷರ ಭದ್ರತೆಗೆ ಸಂಬಂಧಿಸಿದ ಕಾನೂನುಗಳು ಇದಕ್ಕೆ ಅನುವು ಮಾಡಿಕೊಡುವುದಿಲ್ಲ. ಹೀಗಾಗಿ ಒಬಾಮ ಅವರು ತಮ್ಮದೇ ಕಾರಿನಲ್ಲಿ ಆಗಮಿಸುತ್ತಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ ಗಣರಾಜ್ಯೋತ್ಸವ ದಿನದಂದು ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಒಬಾಮ ಅವರೊಂದಿಗೆ ಒಂದೇ ಕಾರಿನಲ್ಲಿ ರಾಜಪಥಕ್ಕೆ ಆಗಮಿಸುವ ಬದಲು ಬೇರೆ ಬೇರೆ ವಾಹನಗಳಲ್ಲಿ ಆಗಮಿಸಬಹುದು ಎಂದು ಅಮೆರಿಕ ಅಧಿಕಾರಿಗಳು ಭಾರತಕ್ಕೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇದೇ ಜನವರಿ 25ರಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತಕ್ಕೆ ಆಗಮಿಸಲಿದ್ದು, ಜನವರಿ 26ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲ್ಲಿದ್ದಾರೆ. ಜನವರಿ 27ರವರೆಗೂ ಭಾರತದಲ್ಲಿರುವ ಒಬಾಮ ಅವರು 27ರ ಸಂಜೆ ಅಮೆರಿಕದತ್ತ ಪ್ರಯಾಣ ಬೆಳೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com