'ಹಾಲ್ ಮಾರ್ಕ'ನ್ನೇ ನಕಲು ಮಾಡುತ್ತಿರುವ ಕದೀಮರು

ಚಿನ್ನದ ಪರಿಶುದ್ಧತೆಯ ಗುರುತು ಹಾಲ್ ಮಾರ್ಕನ್ನು ಕೂಡ ಖದೀಮರು ನಕಲು ಮಾಡುತ್ತಿರುವ ಆಘಾತಕಾರಿ...
ನಕಲಿ ಹಾಲ್ ಮಾರ್ಕ್ ಚಿನ್ನದ ಆಭರಣ (ಸಂಗ್ರಹ ಚಿತ್ರ)
ನಕಲಿ ಹಾಲ್ ಮಾರ್ಕ್ ಚಿನ್ನದ ಆಭರಣ (ಸಂಗ್ರಹ ಚಿತ್ರ)

ಬೆಂಗಳೂರು: ಚಿನ್ನದ ಪರಿಶುದ್ಧತೆಯ ಗುರುತು ಹಾಲ್ ಮಾರ್ಕನ್ನು ಕೂಡ ಖದೀಮರು ನಕಲು ಮಾಡುತ್ತಿರುವ ಆಘಾತಕಾರಿ ಸುದ್ಧಿ ಹೊರಬಿದ್ದಿದೆ.

ಬೆಳ್ಳಗಿರುವುದೆಲ್ಲ ಹಾಲಲ್ಲ. ಹಾಲ್ ಮಾರ್ಕ್ ಇರುವುದೆಲ್ಲವೂ ಪರಿಶುದ್ಧ ಚಿನ್ನವಲ್ಲ ಎಂಬ ಪರಿಸ್ಥಿತಿ ಬಂದಿದೆ. ಹಾಲ್ ಮಾರ್ಕ್ ಇರುವ ಚಿನ್ನ ಪರಿಶುದ್ಧ ಚಿನ್ನ ಎಂಬ ಘೋಷಣೆಗಳನ್ನು ಕೇಳಿ ಚಿನ್ನ ಖರಿದೀಸುವವರು ಈಗ ಎಚ್ಚರ ವಹಿಸಬೇಕಿದೆ. ಏಕೆಂದರೆ ಹಾಲ್ಮಾರ್ಕ್ ಗುರುತನ್ನೇ ನಕಲಿ ಮಾಡುವ ಪ್ರಕರಣ ರಾಜ್ಯದಲ್ಲಿ ಬೆಳಕಿಗೆ ಬಂದಿದೆ.

ಹಾಲ್ಮಾರ್ಕ್ ಎಂದಾಕ್ಷಣ ವಿಶ್ವಾಸಾರ್ಹತೆಯ ಚಿನ್ನ ಎಂದೇ ಜನರು ಪರಿಗಣಿಸುತ್ತಾರೆ. ಹಾಲ್ಮಾರ್ಕ್ ಹೊಂದಿರುವ ಚಿನ್ನವನ್ನೇ ಖರೀದಿಸಬೇಕು ಎಂದು ಅಧಿಕೃತವಾದ ಪ್ರಕಟಣೆ ಹಾಗೂ ಜಾಹೀರಾತುಗಳಿಗೇನು ಬಿಐಎಸ್ (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್)ನಿಂದ ಚಿನ್ನ ಮಾರಾಟಕ್ಕೆ ಪರವಾನಗಿ ಪಡೆದು ಹಾಲ್  ಮಾರ್ಕ್ ಗುರುತು ಹಾಕಿಸಿ ಮಾರುತ್ತಿದ್ದಾರೆ. ಗ್ರಾಹಕರನ್ನು ಆಕರ್ಷಿಸಲು ಹಾಲ್ಮಾರ್ಕ್ ಎಂಬ ಒಂದೇ ಶಬ್ದವನ್ನು ಬಳಸಲಾಗುತ್ತಿದೆ. ಆದರೆ ಇದೇ ಹಾಲ್ಮಾರ್ಕ್ ಗುರುತನ್ನು ಆಭರಣಗಳಿಗೆ ಹಾಕಿಸುವಲ್ಲಿಯೂ ಅಕ್ರಮ ನಡೆಯುತ್ತಿದೆ.

ಅಕ್ರಮ ಹೇಗೆ?
ಜ್ಯುವೆಲ್ಲರಿ ಮಾಲೀಕರು ಆಭರಣಕ್ಕೆ ಹಾಲ್ಮಾರ್ಕ್ ಹಾಕಲು ಬಿಐಎಸ್ನಿಂದ ಪರವಾನಗಿ ಪಡೆದುಕೊಳ್ಳುತ್ತಾರೆ. ಆದರೆ ಹಾಲ್ಮಾರ್ಕ್ ಅನ್ನೇ ನಕಲು ಮಾಡುವವರು ಕಡಿಮೆ ಗುಣಮಟ್ಟದ ಅಥವಾ ಚಿನ್ನವೇ ಅಲ್ಲದ ಅಭರಣಕ್ಕೆ ಗುರುತು ಹಾಕಿ ಮಾರುತ್ತಿದ್ದಾರೆ. ಇಂಥದ್ದೊಂದು ವ್ಯವಹಾರ ದೊಡ್ಡ ಮಳಿಗೆಗಳಲ್ಲಿ ಹಾಗೂ ಸಾರಾಸಗಟಾಗಿ ನಡೆಯುತ್ತಿಲ್ಲ. ಚಿನ್ನ ಖರೀದಿಸುವ ಗ್ರಾಹಕ ಮಾರ್ಕ್ ಇದ್ದರೂ ಪರೀಕ್ಷೆಗೊಳಪಡಿಸಬೇಕು. ಸೂಕ್ಷ್ಮವಾಗಿ ಅವಲೋಕಿಸಿದ ನಂತರ ಆಯ್ದ ವ್ಯಕ್ತಿಗಳಿಗೆ ನಕಲಿ ಮಾಡುವವರು ಆಭರಣವನ್ನು ನೀಡುತ್ತಾರೆ. ಆದರೆ ಈ ಹಾಲ್ಮಾರ್ಕ್ನ ನಂತರ ಬರೆಯಬೇಕಾದ ಸಂಖ್ಯೆಗಳು ನಮೂದಾಗಿರುವುದಿಲ್ಲ. ಪರವಾನಗಿ ಪಡೆದ ಮಳಿಗೆದಾರರು ತಮ್ಮ ಸಂಖ್ಯೆಗಳನ್ನು ಮಾರ್ಕ್ನ ಮುಂದೆ ಹಾಕಬೇಕು. ನಕಲಿ ಮಾಡುವವರಿಗೆ ಮಳಿಗೆಯೇ ಇಲ್ಲದಿರುವಾಗ ಪರವಾನಗಿ ಸಂಖ್ಯೆಯೂ ಇರುವುದಿಲ್ಲ.

ಗ್ರಾಹಕರೇನು ಮಾಡಬೇಕು?
ಹಾಲ್ಮಾರ್ಕ್ ಎಂದಾಕ್ಷಣ ಖರೀದಿಸುವ ಹವ್ಯಾಸವನ್ನು ಬಿಡಬೇಕು. ಹಾಲ್ಮಾರ್ಕ್ ಜೊತೆಗೆ ಮಳಿಗೆದಾರರ ಸಂಖ್ಯೆ, ವರ್ಷ ಅಥವಾ ಇನ್ನಾವುದೇ ಸಂಖ್ಯೆ ಇದ್ದರೆ ಖರೀದಿಸಲು ತೊಂದರೆ ಇಲ್ಲ. ಕೇವಲ ಮಾರ್ಕ್ ಮಾತ್ರವಿದ್ದರೆ ಮಾರಾಟಗಾರರ ವಿರುದ್ಧ ಠಾಣೆಯಲ್ಲಿ ದೂರು ನೀಡಬೇಕು ಅಥವಾ ಆಭರಣದ ಗುಣಮಟ್ಟವನ್ನು ಪರಿಚಯದ ಮಳಿಗೆಯಲ್ಲಿ ಪರೀಕ್ಷಿಸಬೇಕು.

ಹಾಲ್ ಮಾರ್ಕ್ ಎಂದರೆ...
ಚಿನ್ನ ಹಾಗೂ ಬೆಳ್ಳಿಯ ಮಾರಾಟದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಬಿಐಎಸ್ ತಂದ ಗುರುತು ಹಾಲ್ಮಾರ್ಕ್. ಪ್ರತಿ ಆಭರಣ ಮಳಿಗೆಗಳು ಬಿಐಎಸ್ಗೆ ಅರ್ಜಿ ಹಾಕಿ ತಾವು ತಯಾರಿಸಿದ ಆಭರಣಗಳಿಗೆ ಹಾಲ್ ಮಾರ್ಕ್ ಗುರುತು ಹಾಕಿಸುತ್ತವೆ. ದೇಶದಲ್ಲಿ ಗ್ರಾಹಕರಿಗೆ ಗುಣಮಟ್ಟದ ಚಿನ್ನ, ಬೆಳ್ಳಿ ಸಿಗಲು ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯ ಲೋಹ ಮಾರಾಟ ಕ್ಷೇತ್ರದಲ್ಲಿ ದೇಶದ ಗುಣಮಟ್ಟ ಕಾಪಾಡಿಕೊಳ್ಳಲು ಹಾಲ್ ಮಾರ್ಕ್ ಗುರುತು ಹಾಕಿಸುವ ಅವಕಾಶ ಕಲ್ಪಿಸಲಾಯಿತು. ಗ್ರಾಹಕ ಹಾಗೂ ವ್ಯಾಪಾರಿಗಳ ನಡುವೆ ಮೂರನೇ ವ್ಯಕ್ತಿಯಾಗಿ ಬರುವ ಬಿಐಎಸ್ ಗ್ರಾಹಕರಿಗೆ ಆಭರಣದ ಬಗ್ಗೆ ಗ್ಯಾರಂಟಿ ನೀಡುತ್ತದೆ.

ಆಭರಣದಲ್ಲಿ ಏನೇನಿರಬೇಕು?
ತ್ರಿಕೋನಾಕಾರದ ಹಾಲ್ಮಾರ್ಕ್ ಗುರುತು
ತಯಾರಾದ ವರ್ಷ: ಉದಾಹರಣೆಗೆ ವರ್ಷ 2000ಕ್ಕೆ ಎ, 2001ಕ್ಕೆ ಬಿ, 2202ಕ್ಕೆ ಸಿ, 2013ಕ್ಕೆ ಆರ್ ಎಂಬ ಗುರುತು ನೀಡಲಾಗುತ್ತದೆ.
ಪರಿಶುದ್ಥತೆ: ಚಿನ್ನದ ಕ್ಯಾರಟ್ ಸೂಚಿಸುವ 958, 916 ಸಂಖ್ಯೆ.
ಗುರುತು ನೀಡುವ ಬಿಐಎಸ್ ಕೇಂದ್ರದ ಸಂಖ್ಯೆ ಹಾಗೂ ಮಳಿಗೆದಾರನಿಗೆ ನೀಡಿದ ಸಂಖ್ಯೆ

ಆಭರಣದಲ್ಲಿ ಹಾಲ್ ಮಾರ್ಕ್ ಗುರುತು ಇದ್ದಾಕ್ಷಣ ಖರೀದಿಸಬಾರದು. ಹಾಲ್ಮಾರ್ಕ್ ನೊಂದಿಗೆ ಬೇರೆ ಸಂಖ್ಯೆ ಅಥವಾ ಯಾವುದೇ ಕೋಡ್ಗಳಿದ್ದರೂ ವಿಶ್ವಾಸಾರ್ಹ ಚಿನ್ನ ಎಂದೆನಿಸಿಕೊಳ್ಳುತ್ತದೆ. ಲಕ್ಷ್ಮಿಗೋಲ್ಡ್ ಪ್ಯಾಲೆಸ್ನಲ್ಲಿ ಇತ್ತೀಚೆಗೆ ಇದೇ ಮಾದರಿಯ ಆಭರಣ ಪತ್ತೆಯಾಗಿದ್ದು, ಖರೀದಿ ನಂತರ ಆಭರಣದ ಗುಣಮಟ್ಟ ಪರೀಕ್ಷಿಸಲಾಗಿದೆ. ಮಳಿಗೆಗೆ ಆಭರಣ ಮಾರಾಟ ಮಾಡಿರುವ ವ್ಯಕ್ತಿಯ ಮೇಲೆ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಹಾಲ್ಮಾರ್ಕ್ ಗುರುತನ್ನೇ ನಕಲಿ ಮಾಡಿರುವ ವ್ಯಕ್ತಿ ವಿಳಾಸವನ್ನೂ ತಪ್ಪಾಗಿ ನೀಡಿದ್ದಾನೆ. ಅನುಮಾನ ಬಂದರೆ ಕೂಡಲೇ ಪೊಲೀಸರಿಗೆ ದೂರು ನೀಡಬೇಕು. ಕಾನೂನು ಕ್ರಮಕ್ಕಿಂತ ಜನರೇ ಈ ಬಗ್ಗೆ ಎಚ್ಚರ ವಹಿಸಬೇಕು.
-ಕೆಪಿ ನಂಜುಂಡಿ, ಲಕ್ಷ್ಮಿ ಗೋಲ್ಡ್ ಪ್ಯಾಲೆಸ್ ಮಾಲೀಕ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com