ಭಾರತಕ್ಕೆ ನೀತಿ ಪಾಠ ಹೇಳುವ ಚೀನಾ

ಭಾರತದ್ದು ಶೀತಲ ಸಮರದ ಮನಸ್ಥಿತಿಯಂತೆ, ದೇಶ ಅಭಿವೃದ್ಧಿ ಆಗಬೇಕಿದ್ದರೆ ಅಂಥ...
ಭಾರತಕ್ಕೆ ನೀತಿ ಪಾಠ ಹೇಳುವ ಚೀನಾ

ಬೀಜಿಂಗ್: ಭಾರತದ್ದು ಶೀತಲ ಸಮರದ ಮನಸ್ಥಿತಿಯಂತೆ, ದೇಶ ಅಭಿವೃದ್ಧಿ ಆಗಬೇಕಿದ್ದರೆ ಅಂಥ ಮನಸ್ಥಿತಿಯಿಂದ ಹೊರಬರಬೇಕಂತೆ!

ಗಡಿ ವಿಚಾರಕ್ಕೆ ಸಂಬಂಧಿಸಿ ಪ್ರತಿ ಬಾರಿಯೂ ಕಾಲು ಕೆದರಿ ಜಗಳಕ್ಕೆ ನಿಲ್ಲುವ ಚೀನಾ ಇದೀಗ ಭಾರತಕ್ಕೇ ನೀತಿ ಪಾಠ ಮಾಡಲು ಹೊರಟಿದೆ.

ಚೀನಾದ ದಿನಪತ್ರಿಕೆ 'ಗ್ಲೋಬಲ್ ಟೈಮ್ಸ್‌'ನ ಒಪೆಡ್ ಪುಟದಲ್ಲಿ ಭಾರತಕ್ಕೆ ಬುದ್ಧಿ ಹೇಳುವ ಲೇಖನ ಪ್ರಕಟಿಸಲಾಗಿದೆ. ಪ್ರಜಾಪ್ರಭುತ್ವ ಭಾರತದ ಪಾಲಿಗೆ ಹೊರೆ. ಇದರಿಂದಾಗಿಯೇ ಭಾರತದ ಅಭಿವೃದ್ಧಿಗೆ ಅಡ್ಡಿಯಂತೆ! ಸೇನೆ, ಆರ್ಥಿಕತೆ ಮತ್ತು ಎಲ್ಲದರಲ್ಲೂ ಚೀನಾವನ್ನು ಪ್ರತಿಸ್ಪರ್ಧಿಯಂತೆ ಕಾಣುವ ಭಾರತ ಚೀನಾವನ್ನು ಹಿಂದೆ ಹಾಕಲು ಹವಣಿಸುತ್ತಿದೆ. ಚೀನಾದ ಜತೆಗೆ ಮೈತ್ರಿ ಮಾಡಿಕೊಂಡರಷ್ಟೇ ಭಾರತದ ಅಭಿವೃದ್ಧಿ ಸಾಧ್ಯವೆಂತೆ!

ಭಾರತ-ಚೀನಾ ಭಾಯಿ-ಭಾಯಿ?
ಚೀನಾದ ಮಹತ್ವಾಕಾಂಕ್ಷೆಯ ಸಿಲ್ಕ್ ಮಾರ್ಗದಿಂದ ಎರಡೂ ದೇಶಗಳಿಗೆ ಒಳಿತಾಗಲಿದೆ. ಆದರೆ ಚೀನಾ ದೇಶದೊಳಕ್ಕೆ ಕಾಲಿಡುತ್ತೋ ಎಂಬ ಭೀತಿ ಭಾರತವನ್ನು ಕಾಡುತ್ತಿದೆ. ಉಗ್ರರಿಗೆ ನೆರವು ನೀಡಿ, ಈಶಾನ್ಯ ರಾಜ್ಯಗಳ ಆಡಳಿತದಲ್ಲಿ ಚೀನಾ ಮೂಗು ತೂರಿಸಬಹುದು ಎನ್ನುವ ಆತಂಕ ಭಾರತಕ್ಕಿದೆ. ಇಂಥ ಕಲ್ಪನೆಗಳನ್ನು ಬಿಟ್ಟು ಭಾರತ ಮುಂದೆ ಬರಬೇಕು. ಚೀನಾವನ್ನು ಹಿಂದೆ ಹಾಕಿದರೂ ಬೀಜಿಂಗ್ ನವದೆಹಲಿಗೆ ಶುಭ ಹಾರೈಸಲಿದೆ ಎಂದು ಹೇಳುತ್ತದೆ ಈ ಲೇಖನ.

ಜಪಾನ್ ಹೇಳಿಕೆಗೂ ಕಿಡಿ
ಅರುಣಾಚಲ ಭಾರತದ ಅವಿಭಾಜ್ಯ ಅಂಗ ಎನ್ನುವ ಜಪಾನ್ ವಿದೇಶಾಂಗ ಸಚಿವ ಫುಮಿಯೋ ಕಿಶಿಡ ಅವರ ಹೇಳಿಕೆ ಚೀನಾದ ಆಕ್ರೋಶಕ್ಕೆ ಕಾರಣವಾಗಿದೆ. ದೆಹಲಿಯಲ್ಲಿ ಭಾರತೀಯ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ರನ್ನು ಭೇಟಿ ಮಾಡಿದ್ದ ಅವರು, ಈಶಾನ್ಯ ರಾಜ್ಯಗಳಲ್ಲಿ ಮೂಲಸೌಲಭ್ಯಗಳಿಗೆ ಸಂಬಂಧಿಸಿದ ಯೋಜನೆಗಳಿಗೆ ಬೆಂಬಲ ಸೂಚಿಸಿದ್ದರು.

ಇದೇ ವೇಳೆ, ಅರುಣಾಚಲ ಪ್ರದೇಶ ಭಾರತದ ಭಾಗ ಎಂದಿದ್ದಾರೆ. ಚೀನಾ ಮತ್ತು ಭಾರತ ನಡುವೆ ಅರುಣಾಚಲ ಪ್ರದೇಶದ ವಿಚಾರವಾಗಿ ಹಗ್ಗ-ಜಗ್ಗಾಟ ನಡೆಯುತ್ತಿದೆ. ಗಡಿ ವಿವಾದದಲ್ಲಿ ಜಪಾನ್ ಭಾಗಿಯಾಗುವುದಿಲ್ಲ ಎಂದು ಈ ಹಿಂದೆ ಹೇಳಿಕೆ ನೀಡಿತ್ತು. ಅಲ್ಲದೆ, ಈ ರಾಜ್ಯದಲ್ಲಿ ಯಾವ ಯೋಜನೆಗಳನ್ನೂ ಕೈಗೆತ್ತಿಕೊಳ್ಳುವುದಿಲ್ಲ ಎಂದಿತ್ತು. ಆದರೆ ಇದೀಗ ಭಾರತ-ಚೀನಾ ಗಡಿ ವಿವಾದದಲ್ಲಿ ಮೂಗು ತೂರಿಸುವುದು ಬೆಂಕಿಗೆ ತುಪ್ಪ ಹಾಕಿದಂತೆ ಎಂದು ಜಪಾನ್ ವಿರುದ್ಧ ಚೀನಾ ಆಕ್ರೋಶ ವ್ಯಕ್ತಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com