ಕಿರಣ್-ಕೇಜ್ರಿ ಕದನ

ನಿರೀಕ್ಷೆಯಂತೆ ಬಿಜೆಪಿ ಸೋಮವಾರ ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರನ್ನು ದೆಹಲಿ ವಿಧಾನ..
ಕಿರಣ್ ಬೇಡಿ ಮತ್ತು ಅರವಿಂದ್ ಕೇಜ್ರಿವಾಲ್ (ಸಂಗ್ರಹ ಚಿತ್ರ)
ಕಿರಣ್ ಬೇಡಿ ಮತ್ತು ಅರವಿಂದ್ ಕೇಜ್ರಿವಾಲ್ (ಸಂಗ್ರಹ ಚಿತ್ರ)

ಮುಂಬೈ: ನಿರೀಕ್ಷೆಯಂತೆ ಬಿಜೆಪಿ ಸೋಮವಾರ ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರನ್ನು ದೆಹಲಿ ವಿಧಾನಸಭಾ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ.

ಈ ಮೂಲಕ ಫೆ.7ರಂದು ನಡೆಯಲಿರುವ ಚುನಾವಣೆ ಅಣ್ಣಾ ಅವರ ಎಡಬಲದಲ್ಲಿ ಕೂರುತ್ತಿದ್ದ ಬಂಟರ ನಡುವಿನ ಕದನವಾಗಿ ಮಾರ್ಪಟ್ಟಿದೆ. 3 ದಿನಗಳ ಹಿಂದಷ್ಟೇ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಕಿರಣ್ ಬೇಡಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವ ವಿರುದ್ಧ ಕೆಲವು ಹಿರಿಯರು ಅಸಮಾಧಾನ ವ್ಯಕ್ತಪಡಿಸಿದ್ದರೂ ಅದನ್ನೆಲ್ಲ ಬದಿಗೊತ್ತಿ ಬಿಜೆಪಿ ಮುಖಂಡರು ಈ ನಿರ್ಧಾರ ಕೈಗೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷ ಅಮಿತ್ ಶಾ ಉಪಸ್ಥಿತಿಯಲ್ಲಿ ನಡೆದ ಚುನಾವಣಾ ಸಮಿತಿ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆ ಬಳಿಕ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ಈ ಕುರಿತು ಅಧಿಕೃತ ಘೋಷಣೆ ಮಾಡಿದರು. ಬೇಡಿ ಅವರು ಕೃಷ್ಣ ನಗರದಿಂದ ಸ್ಪರ್ಧಿಸಲಿದ್ದಾರೆ.

ಅಪಸ್ವರ ಇಲ್ಲ
ಬೇಡಿ ಅವರ ಸೇರ್ಪಡೆ ಹಾಗೂ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವ ವಿಚಾರಕ್ಕೆ ಸಂಬಂಧಿಸಿ ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ. ಭಿನ್ನಾಭಿಪ್ರಾಯಗಳೇನಿದ್ದರೂ ಮಾಧ್ಯಮದ ಸೃಷ್ಟಿ ಎಂದು ಹೇಳಿದ್ದಾರೆ.

16ರಂದೇ ನಿರ್ಧಾರವಾಗಿತ್ತು
ಹಾಗೆ ನೋಡಿದರೆ ಬೇಡಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸುವ ನಿರ್ಧಾರ ಪಕ್ಷ ಸೇರ್ಪಡೆಗೊಂಡ ದಿನವೇ ಅಂತಿಮಗೊಂಡಿತ್ತು. ಪಕ್ಷ ಸೇರ್ಪಡೆ ಕುರಿತು ಅಧಿಕೃತ ಘೋಷಣೆ ಹೊರಬೀಳುವ ಮೊದಲು ಪ್ರಧಾನಿ ನಿವಾಸದಲ್ಲಿ ಈ ವಿಚಾರ ಸ್ಪಷ್ಟವಾಗಿತ್ತು. ಸ್ವತಃ ನರೇಂದ್ರ ಮೋದಿ ಅವರೇ ಈ ವಿಚಾರವನ್ನು ಬೇಡಿ ಅವರಿಗೆ ತಿಳಿಸಿದ್ದರು. ಬಿಜೆಪಿ ನಡೆಸಿದ ಮತದಾರರ ಸಮೀಕ್ಷೆಯಲ್ಲಿ ಪಕ್ಷದಲ್ಲಿ ಸೂಕ್ತ ಸಿಎಂ ಅಭ್ಯರ್ಥಿ ಕೊರತೆ ಇರುವುದು ಸ್ಪಷ್ಟವಾಗಿತ್ತು. ಜತೆಗೆ ಸಿಎಂ ಹುದ್ದೆಗೆ ಕಿರಣ್ ಬೇಡಿಯೇ ಸೂಕ್ತ ಅಭ್ಯರ್ಥಿ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಈ ಹಿನ್ನಲೆಯಲ್ಲಿ ಬಿಜೆಪಿ ಕೊನೆ ಕ್ಷಣದಲ್ಲಿ ಬೇಡಿ ಅವರನ್ನು ಪಕ್ಷಕ್ಕೆ ಕರೆತಂದಿತ್ತು. ಬೇಡಿ ಸೇರ್ಪಡೆ ಬಿಜೆಪಿಗೆ ಚುನಾವಣೆಗೂ ಮೊದಲೇ ಸಿಕ್ಕ ಅತಿದೊಡ್ಡ ವಿಜಯ ಎಂದೇ ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com