ಎಲ್ಲೆಡೆ ಐಟಿ ಕಂಪನಿಗಳಿಗೆ ಮಣೆ: ಮುಖ್ಯಮಂತ್ರಿ

ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿ ಐಟಿ ಸಂಸ್ಥೆಗಳನ್ನು ಆರಂಭಿಸಲು ಹೆಚ್ಚನ ಉತ್ತೇಜನ...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿ ಐಟಿ ಸಂಸ್ಥೆಗಳನ್ನು ಆರಂಭಿಸಲು ಹೆಚ್ಚನ ಉತ್ತೇಜನ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರಾಜ್ಯ ಸರ್ಕಾರ ಇತ್ತೀಚೆಗೆ ಹೊರ ತಂದಿರುವ ಐಟಿ ನೀತಿಯಲ್ಲಿ 2 ಹಾಗೂ 3ನೇ ಹಂತದ ನಗರಗಳಲ್ಲಿ ಪ್ರಾರಂಭಿಸುವ ಸಂಸ್ಥೆಗಳಿಗೆ ಹೆಚ್ಚಿನ ಸವಲತ್ತು ನೀಡುತ್ತೇವೆ. ಈ ಮೂಲಕ ರಾಜ್ಯದ ಎಲ್ಲ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಯಾಗಬೇಕು. ಬೆಂಗಳೂರಿನ ಹಾಗೆ ರಾಜ್ಯದ ಪ್ರತಿ ಪ್ರದೇಶವೂ ಐಟಿ ಹಬ್ ಆಗಿ ಬೆಳೆಯಬೇಕು ಎಂದು ಕ್ಯಾಪ್‌ಜೆಮಿನಿ ಗ್ಲೋಬಲ್ ಆಫ್ ಶೋರ್ ಬಹುರಾಷ್ಟ್ರೀಯ ಐಟಿ ಸಂಸ್ಥೆಯನ್ನು ನಗರದ ವೈಟ್‌ಫೀಲ್ಡ್‌ನಲ್ಲಿ ಉದ್ಘಾಟಿಸಿ ತಿಳಿಸಿದರು.

ಕಿಯೋನಿಕ್ಸ್‌ನ ಸಣ್ಣ ಪ್ರಯತ್ನದಿಂದ ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ಸ್ ಸಿಟಿ ನಿರ್ಮಾಣವಾಯಿತು. ಈಗ ನೇರವಾಗಿ 10 ಲಕ್ಷಕ್ಕೂ ಅಧಿಕ ಐಟಿ ಉದ್ಯೋಗಿಗಳು ಬೆಂಗಳೂರಿನಲ್ಲಿ ಸೃಷ್ಟಿಯಾಗಿವೆ. ಐಟಿಐಆರ್ ಯೋಜನೆಯಿಂದ ಇನ್ನು 10 ಲಕ್ಷ ಉದ್ಯೋಗವಾಕಾಶ ಸಿಗಲಿದೆ.

ಈ ಯೋಜನೆಗೆ ಅಗತ್ಯ ಭೂಮಿ ನೀಡಲು ಸರ್ಕಾರ ಬದ್ಧ. ಆರಂಭಿಕ ಹಂತದಲ್ಲಿ ಈಗಾಗಲೇ 2072 ಎಕರೆ ಭೂಮಿ ಅಭಿವೃದ್ಧಿಪಡಿಸಲಾಗುತ್ತಿದೆ. ಅಲ್ಲದೇ ಸಾಕಷ್ಟು ಕಂಪನಿಗಳು ಇಲ್ಲಿಗೆ ಬರಲು ಒಪ್ಪಿವೆ ಎಂದರು.

2013-14ನೇ ಆರ್ಥಿಕ ವರ್ಷದಲ್ಲಿ ಬೆಂಗಳೂರಿನಲ್ಲಿ 175 ಕಂಪನಿಗಳು ಆರಂಭವಾಗಿದ್ದು ಸುಮಾರು 850 ಕೋಟಿ ಬಂಡವಾಳ ಹೂಡಿವೆ. ಇದರಿಂದ ಸುಮಾರು 55 ಸಾವಿರ ಉದ್ಯೋಗ ಸೃಷ್ಟಿಯಾಗಿವೆ. ರಾಜ್ಯದಲ್ಲಿ ಇನ್ನಷ್ಟು ಕೈಗಾರಿಕೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಯಾವುದೇ ಸಮಯದಲ್ಲಿ ನಿಮ್ಮ ಸೇವೆಗೆ ನಾನು ಸಿದ್ಧನಿದ್ದೇನೆ ಎಂದು ಉದ್ಯಮಿಗಳಿಗೆ ಮುಖ್ಯಮಂತ್ರಿ ಭರವಸೆ ನೀಡಿದರು.

ರಾಜ್ಯದ ಐಟಿ ರಫ್ತು ಪ್ರಮಾಣವನ್ನು 2020ರೊಳಗೆ 4ಲಕ್ಷ ಕೋಟಿಗೆ ಏರಿಸುವುದು ಸರ್ಕಾರದ ಗುರಿ. ಈ ಹಿನ್ನೆಲೆಯಲ್ಲಿ ಮುಂದಿನ 5 ವರ್ಷದೊಳಗೆ ಹೊಸದಾಗಿ 1 ಸಾವಿರ ಕಂಪನಿಗಳನ್ನು ಆರಂಭಿಸಲು ಅವಕಾಷ ನೀಡಲಾಗುವುದು. ಇದರಿಂದ 20 ಲಕ್ಷಕ್ಕೂ ಅಧಿಕ ಉದ್ಯೋಗವಕಾಶ ಸಿಗಲಿದೆ. ಇದಕ್ಕೆ ಪೂರಕವಾಗಿ ಐಟಿ ನೀತಿ ರೂಪಿಸಲಾಗಿದೆ ಎಂದು ಐಟಿ-ಬಿಟಿ ಸಚಿವ ಎಸ್.ಆರ್.ಪಾಟೀಲ್ ಹೇಳಿದರು.

ಕ್ಯಾಪ್ ಜೆಮಿನಿ ಕಂಪನಿಯು ದೇಶದಲ್ಲಿ 56 ಸಾವಿರ ಉದ್ಯೋಗಿಗಳನ್ನು ಹೊಂದಿದ್ದು, ಅದರಲ್ಲಿ ಕರ್ನಾಟಕದ ಪಾಲು 18 ಸಾವಿರದಷ್ಟಿದೆ. ಐಟಿ ಕಂಪನ್‌ಗಳ ಪಾಲಿಗೆ ಬೆಂಗಳೂರು ಇಂದಿಗೂ ಸ್ವರ್ಗ ಎಂಬುದನ್ನು ಈ ಸಂಸ್ಥೆ ಸಾಬೀತು ಮಾಡಿದೆ. ರಾಜ್ಯದಿಂದ ಕಂಪನಿಗಳು ಕಾಲ್ಕೀಳುತ್ತಿವೆ ಎಂಬ ಆರೋಪಕ್ಕೆ ಉತ್ತರ ದೊರೆತಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com